ಬೆಂಗಳೂರು :ಜನ ಗುಂಪು ಗುಂಪಾಗಿ ಹಾಲು ತರಲು ಮನೆಯಿಂದ ಹೊರ ಬಂದು ಗುಂಪಾಗಿ ಸೇರಿದ್ರೇ ಕೊರೊನಾ ವೈರಸ್ ಹರಿಡೀತೆಂಬ ಭೀತಿಯಿದೆ. ಅದೇ ಕಾರಣಕ್ಕೆ ಲಾಕ್‌ಡೌನ್ ಮಾಡಲಾಗಿದ್ರೂ ಅದರ ಪರಿವೇ ಇಲ್ಲದೇ ಜನ ನೂರಾರು ಸಂಖ್ಯೆಯಲ್ಲಿ ಉಚಿತ ಹಾಲು ಪಡೆಯೋದಕ್ಕೆ ಗುಂಪು ಗುಂಪಾಗಿ ಮುಗಿ ಬಿದ್ದ ಘಟನೆ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ. ಇಲ್ಲಿನ ಸ್ಲಂ ಪ್ರದೇಶಗಳಲ್ಲಿರುವ ಬಡವರಿಗೆ ನಿನ್ನೆಯಿಂದ ಬಿಬಿಎಂಪಿ ಉಚಿತವಾಗಿ ಹಾಲು ವಿತರಣೆ ಮಾಡ್ತಿದೆ. ಆದರೆ, ಹಾಲು ಹಂಚುತ್ತಿರುವುದು ಮಾತ್ರ ಕಸದ ಟಿಪ್ಪರ್‌ನಲ್ಲಿ ಅನ್ನೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಇದೇನಾ ಸ್ವಾಮಿ ಬಡವರಿಗೆ ಹಾಲು ಕೊಡೋ ರೀತಿ.. ಕಸದ ಟಿಪ್ಪರ್‌ನಲ್ಲಿ ಹಾಕಿ.. ಜನ ನೂರಾರು ಸಂಖ್ಯೆಯಲ್ಲಿ ಮುಗಿಬೀಳುವಂತೆ ಮಾಡಿ.. ಒಡೆದ ಪ್ಯಾಕೇಟ್ಗಳ ಹಾಲು ಕೊಡಲಾಗ್ತಿದೆ.. ಉಚಿತ ಹಾಲು ವಿತರಣೆ ಸೂಕ್ತ ರೀತಿ ಆಗದೇ ಕೋವಿಡ್-19 ಹರಡುವ ಭೀತಿ ಹೆಚ್ಚಿಸಿದೆ. ಬಡ ಜನರು ಕೇಳೋದಿಲ್ಲ ಅಂತಾ ಬಿಬಿಎಂಪಿ ಈ ರೀತಿ ಮಾಡ್ತಿದ್ಯಾ? ಅಂತಾ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಉಚಿತ ಹಾಲಿಗಾಗಿ ಜನ ಮುಗಿಬೀಳುವಾಗ ಎಷ್ಟೋ ವಯಸ್ಸಾದವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.