ಬೆಂಗಳೂರು:ನಾಲ್ಕು ಕಾಸು ಸಂಪಾದಿಸುವ ಆಸೆಯಿಟ್ಟುಕೊಂಡು ನಗರಕ್ಕೆ ಬಂದಿದ್ದ ವಲಸೆ ಕಾರ್ಮಿಕರು ಇದೀಗ ದುಡಿದ ಹಣವನ್ನೆಲ್ಲಾ ಮತ್ತೆ ತಮ್ಮ ಊರಿಗೆ ವಾಪಸ್ಸಾಗಲು ಖರ್ಚು ಮಾಡುತ್ತಿದ್ದಾರೆ.
ಲಾಕ್ಡೌನ್ ಬಳಿಕ ಕೆಲಸವು ಇಲ್ಲದೆ, ಸಂಪಾದನೆಯೂ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಸೋಂಕು ತಮ್ಮನ್ನು ಸೋಕುವ ಮುನ್ನ ತಮ್ಮ ಊರುಗಳಿಗೆ ವಾಪಸ್ ಆಗಬೇಕು ಎಂದು ಹಂಬಲಿಸುತ್ತಿದ್ದಾರೆ. ಅದಕ್ಕಾಗಿ ತಾವು ಈವರೆಗೆ ದುಡಿದ ಹಣವನ್ನೆಲ್ಲಾ ಖರ್ಚು ಮಾಡಲು ಮುಂದಾಗಿದ್ದಾರೆ. ಖಾಸಗಿ ಬಸ್, ಟ್ಯಾಕ್ಸಿಗಳ ಮೂಲಕ ಊರು ತಲುಪಲು ಮಾಮೂಲಿ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ಕೊಡುತ್ತಿದ್ದಾರೆ. ಹೀಗೆ ತಾವು ದುಡಿದ ಅಲ್ಪ ಸ್ವಲ್ಪ ಹಣವನ್ನು ಊರಿಗೆ ವಾಪಸ್ ಆಗಲಿಕ್ಕೆ ಖರ್ಚು ಮಾಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾದರೂ ಚಾಲಕ ಮತ್ತು ಪ್ರಯಾಣಿಕರ ನಡುವಿನ ಒಪ್ಪಂದದಿಂದ ಸಾಧ್ಯವಾಗುತ್ತಿಲ್ಲ.
ಊರಿಗೆ ಹೋಗುವ ಆಸೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಂತು ಅಂತರ್ ರಾಜ್ಯ ಸರಕು ಸಾಗಣೆ ವಾಹನಗಳಿಗೆ ಕೈ ಬೀಸುತ್ತಿದ್ದಾರೆ. ತಾವು ತಲುಪು ಬೇಕಿರುವ ರಾಜ್ಯದ ಮಾಹಿತಿ ನೀಡಿ ಚಾಲಕರು ಕೇಳಿದಷ್ಟು ಹಣ ನೀಡಿ ಅವರೊಂದಿಗೆ ತೆರಳುತ್ತಿದ್ದಾರೆ. ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮೂಲದ ವಲಸೆ ಕಾರ್ಮಿಕರು ಟ್ರಕ್ಗಳ ಜೊತೆಗೆ ಟ್ಯಾಕ್ಸಿಗಳ ಮೂಲಕವೂ ಊರಿಗೆ ಹೋಗುತ್ತಿದ್ದಾರೆ. ಆದರೆ ಉತ್ತರ ಭಾರತ ಮೂಲದ ಒಡಿಶಾ, ಬಿಹಾರ, ಉತ್ತರ ಪ್ರದೇಶ, ಅಸ್ಸೋಂ ನಂತಹ ದೂರದ ರಾಜ್ಯಗಳಿಗೆ ತೆರಳಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಸಾರ್ವಜನಿಕ ಬಸ್ ಅಥವಾ ರೈಲುಗಳ ಮೂಲಕ ತಮ್ಮ ಊರುಗಳಿಗೆ ಯಾವಾಗ ಕಳುಹಿಸಿಕೊಡುತ್ತದೆ ಎಂದು ನಿರಾಶ್ರಿತರ ಶಿಬಿರಗಳಲ್ಲಿ ಕಾಯುತ್ತಾ ಕುಳಿತಿದ್ದಾರೆ.