ಬೆಂಗಳೂರು:ಲಾಕ್ಡೌನ್ ಬಳಿಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿರುವುದಕ್ಕೆ ಹೆಚ್ಚುವರಿ ಪಡಿತರದ ಜೊತೆಗೆ ಪರಿಹಾರ ಭತ್ಯೆಯನ್ನು ನೀಡಬೇಕೆಂದು ತಾಕೀತು ಮಾಡಿರುವ ಹೈಕೋರ್ಟ್, ಈ ಸಂಬಂಧ ವಿವರಣೆ ನೀಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿಸೆಂಬರ್ 8ರಂದು ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿದೆ.
ಲಾಕ್ಡೌನ್ ಬಳಿಕ ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಜೊತೆಗೆ ಮಾರ್ಚ್ 24ರಿಂದ ನವೆಂಬರ್ 30ರವರೆಗೆ ಅಂಗನಾಡಿ ಮಕ್ಕಳಿಗೆ ಪೂರೈಸಿರುವ ಆಹಾರ ಧಾನ್ಯಗಳ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ.
ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಾದಿಸಿದ ವಕೀಲ ವಿಕ್ರಂ ಹುಯಿಲ್ಗೋಳ, ಕೇಂದ್ರ ಸರ್ಕಾರದ ಆದೇಶದಂತೆ ಬಿಸಿಯೂಟಕ್ಕೆ ಪರ್ಯಾಯವಾಗಿ ಪಡಿತರ ಕೊಡಲಾಗುತ್ತಿದೆ. ಇದರಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೇಂದ್ರ ಸರ್ಕಾರ ಜುಲೈ 31ರಂದು ರಾಜ್ಯಗಳಿಗೆ ನೀಡಿರುವ ನಿರ್ದೇಶನವನ್ನು ರಾಜ್ಯ ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ. ಅದರಂತೆ ಪಡಿತರದ ಜೊತೆಗೆ ಅದನ್ನು ಬೇಯಿಸಲು ಆಗುವ ಹಣವನ್ನೂ ಸಹ ಪರಿಹಾರದ ರೂಪದಲ್ಲಿ ನೀಡಬೇಕಾಗುತ್ತದೆ ಎಂದಿತ್ತು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ಅಡುಗೆ ಬೇಯಿಸುವ ವೆಚ್ಚಕ್ಕೆ ಬದಲಾಗಿ ತೊಗರಿ ಬೇಳೆ ನೀಡಲಾಗುತ್ತಿದೆ ಎಂದರು.