ಬೆಂಗಳೂರು : ನಗರದ ಜನರ ಬಹುದಿನಗಳ ಬೇಡಿಕೆಯಾಗಿರುವ ಆರ್.ವಿ.ರೋಡ್‌ನಿಂದ ಬೊಮ್ಮಸಂದ್ರ ನಡುವಿನ 18.8 ಕಿಮೀಗಳ ಮೆಟ್ರೋ ಹಳದಿ ಮಾರ್ಗದ ಪರಿಶೀಲನೆಯನ್ನು ಬುಧವಾರ ಸಂಸದ ತೇಜಸ್ವಿ ಸೂರ್ಯ ನಡೆಸಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಈ ಮಾರ್ಗವನ್ನು ಸಾರ್ವಜನಿಕ ಸೇವೆಗೆ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪರಿಶೀಲನೆ ನಂತರ ಮಾತನಾಡಿದ ತೇಜಸ್ವಿ ಸೂರ್ಯ, 2014ರಲ್ಲಿ ಕೇವಲ 7 ಕಿಮೀ ಇದ್ದ ಮೆಟ್ರೋ ಸಂಪರ್ಕವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಹಕಾರದಿಂದ ಪ್ರಸ್ತುತ 78 ಕಿಮೀ ಪೂರ್ಣಗೊಂಡಿದೆ. ಈ ವರ್ಷಾಂತ್ಯದ ವೇಳೆಗೆ 100 ಕಿಮೀ ಪೂರ್ಣಗೊಳ್ಳಲಿದೆ. 2024 ಮುಗಿಯುವುದರೊಳಗಾಗಿ 140 ಕಿಮೀ ವ್ಯಾಪ್ತಿ ಹೊಂದಲಿದ್ದು, ಇದರಿಂದ ಬೆಂಗಳೂರಿಗರ ಬಹುದಿನಗಳ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
ಕೋವಿಡ್ ಸಮಸ್ಯೆ, ಬಿಬಿಎಂಪಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ಅನಗತ್ಯ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದ್ದು, 2024 ಮುಗಿಯುವುದರೊಳಗಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಸಿಲ್ಕ್ ಬೋರ್ಡ್, ಬಿಟಿಎಂ ಮುಖಾಂತರ ನಗರದ ಐಟಿ-ಬಿಟಿ, ಕೈಗಾರಿಕಾ ಕಾರಿಡಾರ್‌ಗಳಿಗೆ ಸಂಪರ್ಕ ಕಲ್ಪಿಸುವ ಈ ಹಳದಿ ಮಾರ್ಗವು 16 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದ್ದು, ಇವುಗಳ ಶೇ.95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಸರ್ಕಾರವನ್ನು ಕೋರುತ್ತೇನೆ ಎಂದು ಸಂಸದರು ತಿಳಿಸಿದರು.
ಪ್ರತಿನಿತ್ಯ ಈ ಮಾರ್ಗದಲ್ಲಿ 2.5 ಲಕ್ಷ ಜನರು ಪ್ರಯಾಣಿಸಲಿದ್ದು, ಇಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ ಬಳಿಯ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಈ ಮಾರ್ಗದ ಜಯದೇವ ನಿಲ್ದಾಣವು 5 ಸ್ತರದ ಸಂಚಾರ ಸಾರಿಗೆಯನ್ನು ಹೊಂದಿದ್ದು, ವಿಶೇಷ ವಿನ್ಯಾಸ ಹೊಂದಿದ ಏಷ್ಯಾದ ಮೊದಲ ನಿಲ್ದಾಣವಾಗಲಿರುವುದು ಗಮನಾರ್ಹ. ಬಿಎಂಆರ್ಸಿಎಲ್ ಅಧಿಕಾರಿಗಳ ಪ್ರಕಾರ ಯೋಜನೆಯ ಅಡಿಯಲ್ಲಿ 16 ನಿಲ್ದಾಣಗಳ ಶೇ 95 ರಷ್ಟು ಕಾರ್ಯ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಆರ್ವಿ ರೋಡ್, ಸಿಲ್ಕ್ ಬೋರ್ಡ್ ಮತ್ತು ಜಯದೇವ ನಿಲ್ದಾಣಗಳಲ್ಲಿ 3 ಇಂಟರ್ ಚೇಂಜ್ ಸೌಕರ್ಯ ಒದಗಿಸಲಾಗಿರುವುದು ಗಮನಾರ್ಹ ಎಂದು ತೇಜಸ್ವಿ ಸೂರ್ಯ ಶ್ಲಾಘಿಸಿದರು.