ಬೆಂಗಳೂರು:ಎರಡನೇ ಹಂತದ ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ ಶಿವಾಜಿನಗರದ ಬಂಬೂ ಬಜಾರ್ ಬಳಿ ಪಿಂಕ್ ಲೈನ್ ಮೆಟ್ರೋ ಮಾರ್ಗದ ಸುರಂಗ ಕಾಮಗಾರಿ ನಡೆಯುತ್ತಿದೆ. ಇದರಿಂದ ಇಲ್ಲಿನ ಸ್ಥಳೀಯ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿವಾಜಿನಗರ - ಗೊಟ್ಟಿಗೆರೆ - ನಾಗವಾರ ಸುರಂಗ ಮಾರ್ಗ ಬಂಬೂ ಬಜಾರ್ ಪ್ರದೇಶದಲ್ಲಿ ಹಾದು ಹೋಗಲಿದೆ. ಈ ಹಿನ್ನೆಲೆ ಕಳೆದ 4 ತಿಂಗಳಿನಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಸುಲ್ತಾನ್ ಜಿ ಗುಂಟಾ ರಸ್ತೆಯಲ್ಲಿನ ಜನರ ಬದುಕು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಸುರಂಗ ಮಾರ್ಗದ ಕಾಮಗಾರಿಯ ತೀವ್ರತೆಗೆ ಮನೆ ಗೋಡೆಗಳು, ಕಟ್ಟಡಗಳು ಬಿರುಕು ಬಿಡುತ್ತಿವೆ.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ಭೂಮಿ ನಲುಗಿದ ಅನುಭವವಾಗ್ತಿದೆ. ಸುರಂಗ ಕೊರೆಯುವಾಗ ಮನೆ ಗೋಡೆಗಳೆಲ್ಲಾ ಬಿರುಕು ಬಿಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು ಸುಲ್ತಾನ್ ಜಿ ಗುಂಟಾ ರಸ್ತೆಯಲ್ಲಿನ ಉಜ್ಜಯಿನಿ ಮಹಾಕಾಳಿ ದೇವಸ್ಥಾನ ಕೂಡ ಅಪಾಯದ ಸ್ಥಿತಿಯಲ್ಲಿದೆ. ದೇವಸ್ಥಾನದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ತಾತ್ಕಾಲಿಕವಾಗಿ ಕಬ್ಬಿಣದ ಕಂಬಗಳಿಂದ ದೇವಸ್ಥಾನದ ಪಿಲ್ಲರ್ಗಳನ್ನು ನಿಲ್ಲಿಸಲು ನಮ್ಮ ಮೆಟ್ರೋ ಕಾಮಗಾರಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವಸ್ಥಾನದ ಅರ್ಚಕರಾದ ಈಶ್ವರ್, ದೇವಸ್ಥಾನಕ್ಕೆ ಹಾನಿಯಾದರೆ ಮತ್ತೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆಂದು ತಿಳಿಸಿದರು.
ದೇವಸ್ಥಾನಕ್ಕೆ ಅಂಟಿಕೊಂಡೇ 35 ಮನೆಗಳಿದ್ದು, ಇಲ್ಲಿನ 4 ಮನೆಗಳ ಗೋಡೆಗಳು ಈಗಾಗಲೇ ಉಬ್ಬಿ ಹೊರ ಬಂದಿರುವ ಸ್ಥಿತಿಯಲ್ಲಿವೆ. ಒಂದು ತಿಂಗಳ ಹಿಂದೆಯಷ್ಟೇ ನೋಡನೋಡುತ್ತಿದ್ದ ಹಾಗೇ ರಸ್ತೆ ಕುಸಿದು ಹಳ್ಳವಾಗಿತ್ತು. ಬಾಂಬೂ ಬಜಾರ್ನ ಸುಲ್ತಾನ್ ಜಿ ಗುಂಟಾ ರಸ್ತೆ ಹದಿನೈದು ಅಡಿ ಆಳಕ್ಕೆ ಕುಸಿದು ಬಿದ್ದಿತ್ತು. ಇದೀಗ ಮನೆ ಮಂದಿಯಲ್ಲೂ ಆತಂಕ ಮನೆ ಮಾಡಿದೆ.