ಬೆಂಗಳೂರು: ಹೈದರಾಬಾದ್ ಪಶುವೈದ್ಯೆ ದಿಶಾ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಬಳಿಕ ಬೆಂಗಳೂರಲ್ಲಿ ಮಹಿಳೆಯರ ರಕ್ಷಣೆಗೆ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಬೆನ್ನಲ್ಲೇ, ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರಗಳು ಮುಂದಾಗಿದ್ದು, ನಮ್ಮ ಮೆಟ್ರೋ ಕೂಡ ಬೋಗಿಯ ಒಳಗೆ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನೇಮಿಸಿದೆ.
ಮಹಿಳೆಯರ ರಕ್ಷಣೆಗೆ ನಮ್ಮ ಮೆಟ್ರೋ ಕೈಗೊಂಡ ಕ್ರಮವೇನು ಗೊತ್ತೆ? - Latest News For Metro
ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ನಮ್ಮ ಮೆಟ್ರೋ ಕೂಡ ಬೋಗಿಯೊಳಗೆ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನೇಮಿಸಿದೆ.

ಮೆಟ್ರೋದಲ್ಲಿ ಮಹಿಳೆಯರಿಗಾಗಿ ಮೀಸಲಿರುವ ಪ್ರತ್ಯೇಕ ಬೋಗಿಗಳಲ್ಲಿ ರಾತ್ರಿ 9 ನಂತರ ಪ್ರಯಾಣಿಕರ ಸಂಖ್ಯೆ ಬಹಳ ವಿರಳವಾಗಿರುತ್ತೆ. ಹಾಗಾಗಿ ಈ ಸಮಯದಲ್ಲಿ ಅಸುರಕ್ಷತೆ ಕಾಡುವ ದೃಷ್ಟಿಯಿಂದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ರಾಜ್ಯ ಸೇರಿದಂತೆ ದೇಶಾದ್ಯಂತ ಈಗ ಮಹಿಳೆಯರ ರಕ್ಷಣೆ, ಸುರಕ್ಷತೆಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿವೆ.
ನಿತ್ಯ ನಮ್ಮ ಮೆಟ್ರೋದಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅದರಲ್ಲಿ ಶೇ. 30 ರಷ್ಟು ಮಹಿಳಾ ಪ್ರಯಾಣಿಕರೇ ಸಂಚರಿಸುತ್ತಾರೆ. ರಾತ್ರಿ ವೇಳೆ ಕೆಲ ಪುರುಷರು ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ ರಾತ್ರಿ ನಂತರ ಪ್ರಯಾಣಿಸುವ ಎಲ್ಲ ರೈಲುಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಬೋಗಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ನಿರಂತರವಾಗಿ ಪರಿಶೀಲನೆ ಕೂಡ ಮಾಡಲಾಗುತ್ತಿದೆ.