ಬೆಂಗಳೂರು: ಕಾಮಗಾರಿಯ ಕಾರಣ ಮೈಸೂರು ರಸ್ತೆ-ಕೆಂಗೇರಿ ನಡುವಿನ ಮೆಟ್ರೋ ರೈಲು ಸೇವೆ 4 ದಿನ ಸ್ಥಗಿತವಾಗಲಿದೆ. ಬಿಎಂಆರ್‌ಸಿಎಲ್ ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ವಿಸ್ತರಣಾ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದ ನಿಯೋಜಿತ ಕಾಮಗಾರಿಗಳಿಗಾಗಿ ಮೈಸೂರು ರಸ್ತೆ-ಕಂಗೇರಿ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳನ್ನು ಜನವರಿ 27 ರಿಂದ ಜ.30 ರವರೆಗೆ ನಾಲ್ಕು ದಿನಗಳ ಅವಧಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ನೀಡಿದೆ.
ಈ ನಾಲ್ಕು ದಿನಗಳ ಕಾಲ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತದೆ. ಬೈಯಪ್ಪನಹಳ್ಳಿಯಿಂದ ಕಂಗೇರಿ ವರೆಗಿನ ಮಾರ್ಗದಲ್ಲಿ ರೈಲು ಸೇವೆಗಳು ಜ.31ರಿಂದ ಬೆಳಗ್ಗೆ 5 ಗಂಟೆಯಿಂದ ವೇಳಾಪಟ್ಟಿಯ ಪ್ರಕಾರ ಪುನಾರಂಭವಾಗಲಿದೆ. ಇತ್ತ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆವರೆಗಿನ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ರೈಲುಗಳು ವೇಳಾಪಟ್ಟಿಯಂತೆಯೇ ಸಂಚರಿಸಲಿವೆ.
ಗಣರಾಜ್ಯೋತ್ಸವಕ್ಕೆ ಪೇಪರ್ ಟಿಕೆಟ್: ನಾಳೆ ನಡೆಯುವ 74ನೇ ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಮೆಟ್ರೋ ರೈಲು ನಿಗಮ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಿದೆ. ಲಾಲ್‌ಬಾಗ್ ಉದ್ಯಾನವನಕ್ಕೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಹೆಚ್ಚು ಜನರು ಆಗಮಿಸುವ ಸಾಧ್ಯತೆ ಇದ್ದು, ನಮ್ಮ ಮೆಟ್ರೋ ಪೇಪರ್ ಟಿಕೆಟ್ ಪರಿಚಯಿಸಿದೆ. ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು 730 ರೂ ನಿಗದಿ ಮಾಡಲಾಗಿದೆ. ಈ ವ್ಯವಸ್ಥೆ ಒಂದು ದಿನ ಮಾತ್ರ. ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಈ ಪೇಪರ್ ಟಿಕೆಟ್ ಖರೀದಿಸಬಹುದು ಎಂದು ಬಿಎಂಆರ್‌ಸಿಎಲ್ ಹೇಳಿದೆ.