ಬೆಂಗಳೂರು: ನೇರಳೆ ಮಾರ್ಗದ ವಿಸ್ತರಿತ ಭಾಗ ಕೆಂಗೇರಿ - ಚಲ್ಲಘಟ್ಟ ಹಾಗೂ ಮಿಸ್ಸಿಂಗ್ ಲಿಂಕ್ ಎನ್ನಿಸಿಕೊಂಡಿದ್ದ ಬೈಯ್ಯಪ್ಪನಹಳ್ಳಿ- ಕೆ.ಆರ್.ಪುರ ಮಾರ್ಗದಲ್ಲಿ ಜನಸಂಚಾರ ಪ್ರಾರಂಭವಾಗಿದ್ದು, ಮೊದಲ ದಿನ ಹೆಚ್ಚುವರಿ ಪ್ರಯಾಣಿಕರು ಸಂಚರಿಸಿದ್ದಾರೆ. ಒಟ್ಟಾರೆ ನೇರಳೆ ಮಾರ್ಗ ಚಲ್ಲಘಟ್ಟ-ವೈಟ್‌ಫೀಲ್ಡ್ (43.49ಕಿಮೀ) ಪೂರ್ಣ ಪ್ರಮಾಣದಲ್ಲಿ ಆರಂಭವಾದಂತಾಗಿದ್ದು, ಸೋಮವಾರ ಪ್ರಯಾಣಿಸಿದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 5ಗಂಟೆಗೆ ಮೊದಲ ರೈಲು ವೈಟ್‌ಫೀಲ್ಡ್ ನಿಂದ ಚಲ್ಲಘಟ್ಟಕ್ಕೆ ಪ್ರಯಾಣಿಸಿತು. ಸಹಜವಾಗಿ ಮೆಟ್ರೋದಲ್ಲಿ ಪ್ರತಿದಿನ 6.30ಲಕ್ಷ ಜನ ಸಂಚರಿಸುತ್ತಿದ್ದು, ಸೋಮವಾರ ಸರಿಸುಮಾರು 6.75 ಲಕ್ಷ ಜನ ಸಂಚರಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇವಲ 1 ಗಂಟೆ 20 ನಿಮಿಷದಲ್ಲಿ ಚಲ್ಲಘಟ್ಟ- ವೈಟ್‌ಫೀಲ್ಡ್ ತಲುಪಲು ಸಾಧ್ಯವಾಗುತ್ತಿರುವುದು ನಗರದ ಜನತೆಗೆ ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.
ಬೆಳಗ್ಗೆ ಮೊದಲ ರೈಲಿನಲ್ಲಿ ಸಂಚಾರ ಮಾಡಿದ ಖಾಸಗಿ ಸಂಸ್ಥೆಯ ಉದ್ಯೋಗಿ ಜ್ಯೋತಿ ಮಾತನಾಡಿ, ಬಹಳ ದಿನಗಳಿಂದ ಈ ಮಾರ್ಗದ ಆರಂಭಕ್ಕೆ ಕಾಯುತ್ತಿದ್ದೆವು. ಆದಷ್ಟು ಬೇಗ ಪ್ರಾರಂಭಿಸಲು ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚಿನ ಚರ್ಚೆಯಾಗಿತ್ತು. ಇದೀಗ ಮಾರ್ಗದಲ್ಲಿ ಪ್ರಯಾಣಿಸುತ್ತಿರುವುದು ತೃಪ್ತಿಕರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಚಲ್ಲಘಟ್ಟದಿಂದ ಕೆಂಗೇರಿವರೆಗೆ ಆಟೋರಿಕ್ಷಾ ಮೂಲಕ ತೆರಳಿ ಮೆಟ್ರೋ ಹತ್ತುತ್ತಿದ್ದ ವಿದ್ಯಾರ್ಥಿಗಳು ಹೊಸ ಮಾರ್ಗ ಆರಂಭಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.