ಬೆಂಗಳೂರು: ತಮಿಳುನಾಡಿನ ಉತ್ತರ ಕರಾವಳಿಯ ಬಳಿ ಸುಳಿಗಾಳಿ ಬೀಸಿರುವುದರ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗಿದೆ. ಮುಖ್ಯವಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಚಿಕ್ಕಬಳ್ಳಾಪುರ, ವಿಜಯನಗರ, ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ಸಾಧಾರಣ ಮಳೆಯಾಗಿದ್ದು, ಮಂಗಳವಾರವೂ ಇದು ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರು ನಗರದ ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು, ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
ಈ ಬಾರಿ ಜನವರಿ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದ್ದು, 6.3 ಮಿ.ಮೀ ಮಳೆಯಾಗಿದೆ. ಕಳೆದ ಬಾರಿ ಈ ಸಮಯದಲ್ಲಿ 6 ಮಿ.ಮೀ ಮಳೆಯಯಾಗಿತ್ತು. ಈ ತಿಂಗಳು ವಾಡಿಕೆಗಿಂತ ಶೇ.70ರಷ್ಟು ಹೆಚ್ಚು ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ 7.3 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.