ಬೆಂಗಳೂರು: ಬಿಪರ್ಜೋಯ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಸೋಮವಾರದಿಂದ ಚುರುಕುಗೊಳ್ಳಲಿದೆ. ಭಾನುವಾರ ಬೆಳಗ್ಗೆಯಿಂದಲೇ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದೆ. ಕರಾವಳಿ ಸೇರಿ ರಾಜ್ಯದ ವಿವಿಧೆಡೆ ವರ್ಷಧಾರೆಯಾಗಿದ್ದು, ಮುಂಗಾರು ಚುರುಕುಗೊಳ್ಳುವ ಲಕ್ಷಣ ಗೋಚರಿಸಿದೆ. ಮುಂದಿನ 48 ಗಂಟೆಗಳ ಕಾಲ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 2 ದಿನ ಒಳನಾಡಿನ ಕೆಲವೆಡೆ, ಕರಾವಳಿಯಯಲ್ಲಿ ಗುಡುಗು ಮಿಂಚಿನ ಸಹಿತ ಮಳೆಯಾಗಲಿದೆ. ಗಾಳಿಯ ವೇಗವು ಘಂಟೆಗೆ 30 ರಿಂದ 40 ಕಿ.ಮೀ ತಲುಪುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು ರಾಜ್ಯದ ಒಂದೆರಡು ಕಡೆಗಳಲ್ಲಿ 4-5 ಹಾಗೂ ಕೆಲವು ಕಡೆಗಳಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ. ಶನಿವಾರ ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ 39.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ.ನಿಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಶನಿವಾರ ಕರಾವಳಿಯ ಬಹುತೇಕ ಕಡೆ ಮತ್ತು ಒಳನಾಡಿನ ಕೆಲವೆಡೆ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ಅತಿ ಹೆಚ್ಚು 12 ಸೆಂ.ಮೀ. ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 10 ಸೆಂ.ಮೀ ಮುಲ್ಕಿ, ಉಪ್ಪಿನಂಗಡಿಯಲ್ಲಿ 6 ಸೆಂ.ಮೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 6 ಸೆಂ.ಮೀ, ಹೊನ್ನಾವರ, ಕುಮಟಾ, ಕಾರವಾರ, ಕದ್ರಾದಲ್ಲಿ ತಲಾ 4 ಸೆಂ.ಮೀ, ಮಾಣಿ, ಕ್ಯಾಸಲ್ ರಾಕ್, ಶಿರಾಲಿ, ಗೋಕರ್ಣ, ಕೋಟ, ಸುಳ್ಯ, ಸಿಂಧನೂರಿನಲ್ಲಿ 3 ಸೆಂ.ಮೀ, ಗೇರುಸೊಪ್ಪ, ಬೆಳ್ತಂಗಡಿ, ಕೊಲ್ಲೂರು, ಭಾಗಮಂಡಲದಲ್ಲಿ 2 ಮತ್ತು ಉಡುಪಿ, ಕುಂದಾಪುರ, ಕಾರ್ಕಳ, ಸಿದ್ದಾಪುರ, ಅಂಕೋಲಾ, ಧರ್ಮಸ್ಥಳ, ಪುತ್ತೂರಿನಲ್ಲಿ 1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.