ಬೆಂಗಳೂರು: ನೈಜತೆ ಹಾಗೂ ವಾಸ್ತವತೆಗೆ ದೂರವಾದ ಹಾಗೂ ಕೇವಲ ಪೇಪರ್ ಘೋಷಿತ ಬಜೆಟ್ ಇದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಕಾಗದದಲ್ಲಿ ಮಾತ್ರ ಉಳಿಯುವ ಬಜೆಟ್. ಮುಖ್ಯಮಂತ್ರಿಗಳ ಭಾಷಣದಲ್ಲಿ ದಮ್ಮು ಇರಲಿಲ್ಲ. ನಾವು ಕಿವಿಗೆ ಚೆಂಡು ಹೂವು ಹಾಕಿಕೊಂಡು ಹೋಗಿದ್ದೆವು. ಅದಕ್ಕೆ ಬೆಲೆ ಕೊಡುವಷ್ಟು ಮೌಲ್ಯದ ಬಜೆಟ್ ಸಹ ಇದಲ್ಲ. ಉದ್ಯೋಗ ಸೃಷ್ಟಿ, ಮಹಿಳಾ ಸ್ವಾವಲಂಬನೆ ಸೇರಿದಂತೆ ಯಾವ ಕ್ಷೇತ್ರಕ್ಕೂ ಅವಕಾಶವಿಲ್ಲ ಎಂದರು.
40 ಪರ್ಸೆಂಟ್‌ಗೆ ಉತ್ತರ ಇಲ್ಲ: ರಾಜ್ಯದಲ್ಲಿ ಭಾರಿ ಹವಾ ಸೃಷ್ಟಿಸಿರುವ 40 ಪರ್ಸೆಂಟ್ ಸರ್ಕಾರ ಆರೋಪಕ್ಕೂ ಉತ್ತರ ಕೊಟ್ಟಿಲ್ಲ. ಎಲ್ಲ ಕ್ಷೇತ್ರಗಳು ಹಾಗೂ ಕೃಷಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಕಲ್ಪಿಸುವ ಮೊದಲು ಗೃಹ ಸಚಿವರು ಅಡಿಕೆ ಬೆಳೆಯುವುದನ್ನು ನಿಲ್ಲಿಸಿ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ:ಅಶ್ವತ್ಥ ನಾರಾಯಣ ವಿರುದ್ದ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿ, ರಾಮ ಮಂದಿರವಾದರೂ ಕಟ್ಟು, ಸೀತಾ ಮಂದಿರವಾದರೂ ಕಟ್ಟು, ಅಶ್ವತ್ಥ ನಾರಾಯಣ ಮಂದಿರವಾದರೂ ಕಟ್ಟು, ಬಸವರಾಜ ಮಂದಿರವಾದರೂ ಕಟ್ಟು, ಯಡಿಯೂರಪ್ಪ ಮಂದಿರವಾದರೂ ಕಟ್ಟು, ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ಮೊದಲು ರಾಮನಗರದಲ್ಲಿ ಬಿಜೆಪಿ ಆಫೀಸ್ ಕಟ್ಟಲಿ ಎಂದು ಟಾಂಗ್ ಕೊಟ್ಟರು.