ಕರ್ನಾಟಕ

karnataka

ETV Bharat / state

ನೆನಪಿನ ಶಕ್ತಿ ಇಲ್ಲದ ವೃದ್ಧನಿಗೆ ಅಪಘಾತ.. ಆ್ಯಕ್ಸಿಡೆಂಟ್ ಮಾಡಿದ್ದ ವ್ಯಕ್ತಿಯ ಕುಟುಂಬ ಸದಸ್ಯರಿಂದಲೇ ಗಾಯಾಳು ಆರೈಕೆ! - people searching for accident victim family members

ಅಪರೇಷನ್ ನಡೆದ ಒಂದೇ ದಿನದಲ್ಲಿ ವೃದ್ದ ಚೇತರಿಸಿಕೊಂಡು ನಡೆದಾಡಿದ್ದಾರೆ. ಆದರೆ, ವೃದ್ಧನ ವಾರಸುದಾರರು ಈವರೆಗೂ ಪತ್ತೆಯಾಗಿಲ್ಲ. ಕಳೆದೊಂದು ವಾರದಿಂದ ನಂಜುಂಡರೆಡ್ಡಿಯ ಅತ್ತೆ-ಮಾವ ವೃದ್ಧನ ಆರೈಕೆ ಮಾಡುತ್ತಿದ್ದಾರೆ. ವೃದ್ದ ತನ್ನ ಹೆಸರು ಗಂಗಪ್ಪ ಎಂದು ಹೇಳುತ್ತಿದ್ದಾನೆ..

memory lost person got accident in doddaballapura
ವೃದ್ಧನ ಕುಟುಂಬಸ್ಥರಿಗಾಗಿ ಶೋಧ

By

Published : Dec 2, 2020, 12:21 PM IST

ದೊಡ್ಡಬಳ್ಳಾಪುರ :ಇದೊಂದು ಅಪರೂಪದ ಘಟನೆ. ನೆನಪಿನ ಶಕ್ತಿ ಇಲ್ಲದ ವೃದ್ಧನೊಬ್ಬನಿಗೆ ವ್ಯಕ್ತಿಯೊಬ್ಬ ಅಪಘಾತ ಮಾಡಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ಅಚ್ಚರಿ ಅಂದ್ರೆ ಅಪಘಾತ ಮಾಡಿದ ವ್ಯಕ್ತಿಯ ಕುಟುಂಬ ಸದಸ್ಯರೆಲ್ಲ ಸೇರಿ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನ ಆಸ್ಪತ್ರೆಯಲ್ಲಿ ಆರೈಕೆ ಮಾಡ್ತಿದ್ದಾರೆ. ಜತೆಗೆ ಗಾಯಾಳುವಿನ ಕುಟುಂಬ ಸದಸ್ಯರ ಪತ್ತೆಗೆ ಶ್ರಮಿಸ್ತಿದ್ದಾರೆ.

ವೃದ್ಧನ ಕುಟುಂಬಸ್ಥರಿಗಾಗಿ ಶೋಧ

ನವೆಂಬರ್ 25ರ ರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ನಿವಾಸಿ ನಂಜುಂಡ ರೆಡ್ಡಿ ಎಂಬುವರು ದೊಡ್ಡಬಳ್ಳಾಪುರ-ಗೌರಿಬಿದನೂರು ರಸ್ತೆಯ ಮಾಕಳಿ ಗ್ರಾಮದ ಬಳಿ ಬರುವಾಗ, ಕಾರಿನಿಂದ ಬಚಾವ್ ಆಗುವ ಯತ್ನದಲ್ಲಿ ನಂಜುಂಡರೆಡ್ಡಿಯ ಬೈಕ್​ಗೆ ಅಡ್ಡವಾಗಿ ಬಂದ ವೃದ್ಧ ಬೈಕ್​ಗೆ ಡಿಕ್ಕಿ ಹೊಡೆದರು.

ಈ ವೇಳೆ ಸವಾರ ನಂಜುಂಡ ರೆಡ್ಡಿ, ವೃದ್ಧ ಇಬ್ಬರೂ ಗಾಯಗೊಂಡಿದ್ದರು. ಇವರನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಗೆ ಸೇರಿದ ಮೇಲೆಯೇ ನಂಜುಂಡರೆಡ್ಡಿಗೆ ಮತ್ತೊಂದು ಆಘಾತ ಕಾದಿತ್ತು. ಗಾಯಗೊಂಡ ವೃದ್ದನಿಗೆ ನೆನಪಿನ ಶಕ್ತಿ ಇಲ್ಲ. ತಾನು ಎಲ್ಲಿದ್ದೆನೆಂಬ ಅರಿವೂ ಇಲ್ಲ. ನಾಟಕದ ಹಾಡು ಹೇಳ್ಕೊಂಡು ತನ್ನ ಪಾಡಿಗೆ ತಾನು ಇರುತ್ತಾನೆ.

ಮೆಡಿಕೋ ಲೀಗಲ್​ ಕೇಸ್ (MLC) ಆಧಾರದ ಮೇಲೆ ವೈದ್ಯರಾದ ಡಾ. ಮಂಜುನಾಥ್, ಡಾ ಪಾರ್ಥಸಾರತಿ, ಡಾ.ರಾಜು, ಡಾ. ಅರ್ಚನಾ ಮತ್ತು ತಂಡ ವೃದ್ಧನಿಗೆ ಶಸ್ತ್ರಚಿಕಿತ್ಸೆ ನಡೆಸಿ ಕಾಲಿಗೆ ರಾಡ್ ಹಾಕಿದ್ದಾರೆ. ಆಪರೇಷನ್ ಮಾಡುವ ವೇಳೆಯೂ ವೃದ್ಧ ನಾಟಕದ ಹಾಡನ್ನು ಹಾಡುತ್ತಿದ್ದನಂತೆ.

ಅಪರೇಷನ್ ನಡೆದ ಒಂದೇ ದಿನದಲ್ಲಿ ವೃದ್ದ ಚೇತರಿಸಿಕೊಂಡು ನಡೆದಾಡಿದ್ದಾರೆ. ಆದರೆ, ವೃದ್ಧನ ವಾರಸುದಾರರು ಈವರೆಗೂ ಪತ್ತೆಯಾಗಿಲ್ಲ. ಕಳೆದೊಂದು ವಾರದಿಂದ ನಂಜುಂಡರೆಡ್ಡಿಯ ಅತ್ತೆ-ಮಾವ ವೃದ್ಧನ ಆರೈಕೆ ಮಾಡುತ್ತಿದ್ದಾರೆ. ವೃದ್ದ ತನ್ನ ಹೆಸರು ಗಂಗಪ್ಪ ಎಂದು ಹೇಳುತ್ತಿದ್ದಾನೆ.

ಆದರೆ, ಒಂದೊಂದು ಬಾರಿ ಒಂದು ಊರಿನ ಹೆಸರು ಹೇಳುತ್ತಿದ್ದಾನೆ. ಆತ ಹೇಳಿದ ಊರಿಗೆ ಹೋಗಿ ಆತನ ಕುಟುಂಬಸ್ಥರನ್ನು ಪತ್ತೆ ಮಾಡುವ ಯತ್ನ ನಡೆಸಿದ್ದಾರೆ. ಆದರೆ, ಈ ಸಮಯದಲ್ಲಿ ಗಂಗಪ್ಪ ನಮ್ಮವರೇ ಎಂದು ನಂಜುಂಡರೆಡ್ಡಿಯಿಂದ ಒಬ್ಬರು ಹಣ ಕಿತ್ತಿದ್ದಾರಂತೆ.

ಈಗ ಎಚ್ಚೆತ್ತ ನಂಜುಂಡರೆಡ್ಡಿ, ಆಧಾರ್​ ಕಾರ್ಡ್ ಆಧಾರದ ಮೇಲೆ ವೃದ್ಧನ ಕುಟುಂಬಸ್ಥರ ಪತ್ತೆಗೆ ಮುಂದಾಗಿದ್ದಾರೆ. ಈ ಬಗ್ಗೆ ಮಾಧ್ಯಮದ ಮೂಲಕ ವಿನಂತಿ ಮಾಡಿರುವ ನಂಜುಂಡರೆಡ್ಡಿ ಕುಟುಂಬ, ಗಂಗಪ್ಪನ ಮನೆಯವರು ಯಾರಾದರೂ ಇದ್ದರೆ ಬಂದು ಕರೆದುಕೊಂಡು ಹೋಗಿ, ಇಲ್ಲವಾದಲ್ಲಿ ಅವರನ್ನು ಅನಾಥಾಶ್ರಮಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details