ಬೆಂಗಳೂರು:ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಡಿದ ವೈದ್ಯರನ್ನು ಪ್ರತಿವರ್ಷ ಸ್ಮರಿಸಲು ಆರೋಗ್ಯ ಸೌಧದ ಆವರಣದಲ್ಲಿ ವೈದ್ಯರ ಸ್ಮಾರಕ ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರೋಗ್ಯ ಸೌಧದಲ್ಲಿ 'ರಾಷ್ಟ್ರೀಯ ವೈದ್ಯರ ದಿನಾಚರಣೆ'ಯಲ್ಲಿ ಮಾತನಾಡಿದ ಸಚಿವರು, ಯುದ್ಧದಲ್ಲಿ ಮಡಿದ ಸೈನಿಕರನ್ನು ಮಾತ್ರ ಹುತಾತ್ಮರು ಎಂದು ಕರೆಯಲಾಗುತ್ತದೆ. ದೇಶದಲ್ಲಿ 700 ಕ್ಕೂ ಅಧಿಕ ವೈದ್ಯರು ಕೋವಿಡ್ ಕರ್ತವ್ಯದಲ್ಲಿ ಸಾವನ್ನಪ್ಪಿದ್ದಾರೆ. ವೈದ್ಯರು, ಆರೋಗ್ಯ ಸಿಬ್ಬಂದಿ ಕೋವಿಡ್ ವಿರುದ್ಧದ ಯುದ್ಧದಲ್ಲಿ ಇರುವುದರಿಂದ ಅವರನ್ನು ಯೋಧರು ಎಂದು ಕರೆಯಲಾಗಿದೆ. ಹಾಗೆಯೇ ಈ ಕಾರ್ಯದಲ್ಲಿ ಮೃತರಾದವರನ್ನು ಹುತಾತ್ಮರು ಎಂದು ಕರೆಯಲಾಗಿದೆ.
ಈ ಹುತಾತ್ಮ ವೈದ್ಯರ ಸ್ಮರಣಾರ್ಥ ಆರೋಗ್ಯ ಸೌಧದ ಆವರಣದಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಉತ್ತಮ ವಿನ್ಯಾಸ ಮಾಡಿಸಿ ಸ್ಮಾರಕ ನಿರ್ಮಿಸಲಾಗುವುದು. ವೈದ್ಯರ ಕುಟುಂಬದವರು ಪ್ರತಿ ವರ್ಷದ ನಿಗದಿತ ದಿನ ಬಂದು ಸ್ಮಾರಕಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.
ದೆಹಲಿಯಲ್ಲಿ ಸೈನಿಕ ಸ್ಮಾರಕವಿದ್ದು, ಅಲ್ಲಿ ಯೋಧರಿಗೆ ಎಲ್ಲರೂ ಗೌರವ ಸಲ್ಲಿಸುತ್ತಾರೆ. ಅದೇ ರೀತಿ ಇಲ್ಲಿ ಸ್ಮಾರಕ ನಿರ್ಮಿಸಿ ಯಾವಾಗಲೂ ಅವರನ್ನು ಸ್ಮರಿಸಬೇಕು. ಈ ಕಷ್ಟಕಾಲದಲ್ಲಿ ಶ್ರಮಿಸುತ್ತಿರುವ ಎಲ್ಲ ವೈದ್ಯರಿಗೆ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿದರು.