ಬೆಂಗಳೂರು:ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಕುರಿತು ಪಕ್ಷಾತೀತವಾಗಿ ಆಗ್ರಹ ಕೇಳಿ ಬಂದಿದೆ. ಸದಸ್ಯರ ಒತ್ತಡಕ್ಕೆ ಮಣಿದ ಶಿಕ್ಷಣ ಸಚಿವರು ಸಿಎಂ ಜೊತೆ ಸಭೆ ನಡೆಸುವ ಭರವಸೆ ನೀಡಿದರು.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಂಕನೂರ್ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಖಾಲಿ ಇರುವ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನಿರೀಕ್ಷೆಯಲ್ಲಿದೆ. ಅನುಮತಿ ಸಿಗುತ್ತಿದ್ದಂತೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.
ಆಯನೂರು ಮಂಜುನಾಥ್ ಆಕ್ಷೇಪ: ಸಚಿವರ ಉತ್ತರಕ್ಕೆ ಹಿರಿಯ ಸದಸ್ಯ ಆಯನೂರು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲದಕ್ಕೂ ಅರ್ಥಿಕ ಇಲಾಖೆಯನ್ನೇ ಕೇಳಬೇಕಾದರೆ ಸಚಿವರು ಯಾಕೆ ಬೇಕು?, ನಾವು ಪ್ರಶ್ನೆ ಕೇಳುವುದು ಸಚಿವರಿಗೆ, ಉತ್ತರ ನೀಡಬೇಕಿರುವುದು ಸಚಿವರು. ಅವರು ಇನ್ನೊಂದು ಇಲಾಖೆ ಕಡೆ ಬೆರಳು ಮಾಡಬಾರದು ಎಂದು ಆರ್ಥಿಕ ಇಲಾಖೆ ಒಪ್ಪಿಗೆ ಎನ್ನುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ಮುಂದೆ ಆರ್ಥಿಕ ಇಲಾಖೆ ಅನುಮತಿ ಪಡೆದು ಎನ್ನಬಾರದು, ಅದು ನಿಮ್ಮ ಕರ್ತವ್ಯ ಎಂದು ಸ್ವಪಕ್ಷೀಯ ಸಚಿವರಿಗೆ ಚಾಟಿ ಬೀಸಿದರು.
ಇದನ್ನೂ ಓದಿ:ಎಲ್ಲ ಜಿಲ್ಲೆಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಆರೋಗ್ಯ ಸಚಿವ ಡಾ ಕೆ ಸುಧಾಕರ್
ಈ ವೇಳೆ ಮಾತನಾಡಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಶಿಕ್ಷಕರು ನಿವೃತ್ತರಾದರೆ ಮರುದಿನ ಹೊಸ ಶಿಕ್ಷಕರು ಹಾಜರಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳಿಗೆ ಹೇಗೆ ಶಿಕ್ಷಣ ಕೊಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು:ಪಕ್ಷಾತೀತವಾಗಿ ಎಲ್ಲ ಸದಸ್ಯರು ಆರ್ಥಿಕ ಇಲಾಖೆ ಅನುಮತಿ ಪಡೆದು ಎನ್ನುವ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಬಗ್ಗೆ ಮಾತನಾಡಿದ ಸಚಿವ ನಾಗೇಶ್, ಪರಿಷತ್ ಸದಸ್ಯರು ಮತ್ತು ಸಿಎಂ ಜೊತೆ ಚರ್ಚಿಸಿ ಶಿಕ್ಷಣ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ದೈಹಿಕ ಶಿಕ್ಷಕರ ಖಾಲಿ ಹುದ್ದೆ ಭರ್ತಿ: ದೈಹಿಕ ಮತ್ತು ಚಿತ್ರಕಲೆ ಶಿಕ್ಷಕರ ಹುದ್ದೆ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಣದಲ್ಲಿ 4836, ಚಿತ್ರಕಲೆ ಶಿಕ್ಷಣ 2679 ಹುದ್ದೆಗಳಿವೆ. ಇದರಲ್ಲಿ 2120 ಹುದ್ದೆಗಳು ಖಾಲಿ ಇವೆ. ಆರ್ಥಿಕ ಇಲಾಖೆಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅನುಮತಿ ಸಿಗುತ್ತಿದ್ದಂತೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸದ್ಯ 200 ದೈಹಿಕ ಶಿಕ್ಷಕರ ನೇಮಕಕ್ಕೆ ಅನುಮತಿ ಸಿಕ್ಕಿದೆ. ನೇರ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.