ಬೆಂಗಳೂರು: ವಿವಿಧ ದಲಿತ ಸಂಘಟನೆ ಮುಖಂಡರು ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಧರ್ಮಸೇನಾ, ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷ ಕೃಷ್ಣಪ್ಪ, ಭೀಮ್ ಪ್ರಜಾಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್, ಕರ್ನಾಟಕ ಸಮಗ್ರ ಸೈನಿಕ ದಳ ಮಹಿಳಾ ಅಧ್ಯಕ್ಷರಾದ ಕಮಲಮ್ಮ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೇರಿದಂತೆ ರಾಜ್ಯದ ವಿವಿಧ ದಲಿತ ಸಂಘಟನೆ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸೇನಾ, "ಇಂದು ದಲಿತರೆಲ್ಲರೂ ಒಗ್ಗೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಲಿತರ ಏಳಿಗೆ, ಅಭಿವೃದ್ಧಿಗೆ ಕಂಟಕ, ಅಪಾಯ ಎದುರಾದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ದಲಿತರಿಗೆ ಚೈತನ್ಯ ತುಂಬಿದೆ. ಇನ್ನು ಪರಮೇಶ್ವರ್ ಅವರನ್ನು ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದೆ. ಆ ಮೂಲಕ ದಲಿತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿ ಸಮುದಾಯಕ್ಕೆ ಶಕ್ತಿ ತುಂಬಲಾಗಿದೆ" ಎಂದು ತಿಳಿಸಿದರು.
ಈ ರಾಜ್ಯದಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಸುಮಾರು 20 ಸಾವಿರ ಸಂಘಟನೆಗಳಿವೆ. ನಾನು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷನಾಗಿ ನೇಮಕಗೊಂಡ ನಂತರ ದಲಿತರ ನಡೆ ಕಾಂಗ್ರೆಸ್ ಕಡೆ ಎಂಬ ಕಾರ್ಯಕ್ರಮದ ಮೂಲಕ ಸ್ಥಳೀಯ ಮಟ್ಟದಲ್ಲಿ ಒಬ್ಬರೇ ಆದರೂ ಅವರನ್ನು ನೀರ್ಲಕ್ಷಿಸದೇ ದಲಿತ ಸಮುದಾಯದವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರಬೇಕು ಎಂದು ನಮ್ಮ ಘಟಕದ ಎಲ್ಲ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದೆ ಎಂದು ಹೇಳಿದರು.