ಬೆಂಗಳೂರು: ಪಾದಯಾತ್ರೆ ಹಿಂಪಡೆದ ಕಾಂಗ್ರೆಸ್ಗೆ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಇದು ಸಿಎಂ ಅವರ ರಾಜತಾಂತ್ರಿಕ ಜಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಣ್ಣಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಅವರ ಪಾದಯಾತ್ರೆ ವಿರುದ್ಧ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸಿದ್ದಕ್ಕೆ ನೋಟಿಸ್ ಕೊಡಲಾಗಿದೆ. ಲಾಠಿ ಚಾರ್ಜ್ ಮಾಡುವುದು ದೊಡ್ಡ ವಿಚಾರ ಅಲ್ಲ. ಆದರೆ ಸಿಎಂ ರಾಜತಾಂತ್ರಿಕವಾಗಿ ಇದನ್ನು ನಿಭಾಯಿಸಿದ್ದಾರೆ. ಇದು ರಾಜ್ಯದ ಜನರ ಜಯ ಎಂದರು.
ರಾಜ್ಯದ ಹಿತ ಕಾಪಾಡಲು ಅಂತಿಮವಾಗಿ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ. ಹಲವು ಕಾಂಗ್ರೆಸ್ ಮುಖಂಡರಿಗೆ ಪಾಸಿಟಿವ್ ಬಂದಿತ್ತು. ಇದರಿಂದ ಎಷ್ಟು ಅಮಾಯಕರಿಗೆ ಕೋವಿಡ್ ಬಂದಿರಬಹುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಈ ಸ್ಥಿತಿಯಲ್ಲಿ ಏಕೆ ಪಾದಯಾತ್ರೆ ಎಂಬುದು ಗೊತ್ತಿಲ್ಲ. ಕೆಲವು ಕಾಂಗ್ರೆಸ್ ನಾಯಕರು ಈ ನಿರ್ಧಾರ ಕೈಗೊಂಡಿರುವುದು ಒಳ್ಳೆಯ ತೀರ್ಮಾನ ಎಂದು ತಿಳಿಸಿದರು.
ಅವರ ಪ್ರತಿಭಟನೆಗೆ ನಮ್ಮ ವಿರೋಧ ಇರಲಿಲ್ಲ. ಆದರೆ ಸಮಯ ಸರಿ ಇಲ್ಲ ಎಂದು ಹೇಳಿದ್ದೆವು. ನೀರಾವರಿ ಯೋಜನೆಗಳಿಗೆ ಯಾವತ್ತೂ ಬಿಜೆಪಿ ಬಹಳ ಬದ್ಧತೆ ತೋರಿಸಿದೆ. ನೀರಾವರಿ ಯೋಜನೆಗಳಿಗೆ ಪ್ರತಿಪಕ್ಷ ಜೋಡಿಸಲಿ. ಇದು ಅಂತಾರಾಜ್ಯದ ಸಮಸ್ಯೆ ಆಗಿದೆ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ನೀವು ಪಾದಯಾತ್ರೆ ಎಲ್ಲಿಗೆ ಹೋಗಬೇಕಿತ್ತು. ತಮಿಳುನಾಡಿನಲ್ಲಿ ಸರ್ಕಾರ ನಿಮ್ಮದೇ ಮೈತ್ರಿ ಪಕ್ಷ ಇದೆ. ಅವರ ಜೊತೆ ಮಾಡನಾಡಬೇಕಿತ್ತು. ಪಾದಯಾತ್ರೆ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತಾ? ಹಾಗಾದರೆ ನಾವೆಲ್ಲರೂ ಪಾದಯಾತ್ರೆ ಮಾಡೋಣ ಎಂದು ತಿಳಿಸಿದರು.
ಇದನ್ನೂ ಓದಿ: ಪಾದಯಾತ್ರೆ ಕೈ ಬಿಡಲು ಕೋರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಪತ್ರ
ಕೋವಿಡ್ ಅಂಕಿಅಂಶ ನಕಲಿ ಎಂದು ಹೇಳಿಕೆ ನೀಡುತ್ತಿರುವ ಡಿಕೆಶಿ ಬಗ್ಗೆ ನಮಗೆ ಕನಿಕರವಿದೆ. ಆರೋಗ್ಯ ಸಿಬ್ಬಂದಿ, ವೈದ್ಯರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ನೈತಿಕ ಸ್ಥೈರ್ಯವನ್ನು ಕಡಿಮೆ ಮಾಡಬಾರದು. ಖರ್ಗೆ, ಮೊಯ್ಲಿ ಅವರಿಗೆ ನಾವು ಕರೆದು ತಂದು ಪಾಸಿಟಿವ್ ಮಾಡಿಸಿದ್ವಾ? ಎಂದು ಸಚಿವರು ಪ್ರಶ್ನಿಸಿದರು.