ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆ ಇತ್ತೀಚೆಗೆ ಖಂಡನಾ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯ ವಿರೋಧಿಸಿ ರಾಜ್ಯ ಸರ್ಕಾರ ಕೈಗೊಂಡ ಖಂಡನಾ ನಿರ್ಣಯಕ್ಕೆ ನದಿ ಜೋಡಣೆಯ ಡಿಪಿಆರ್(ವಿಸ್ತೃತ ಯೋಜನಾ ವರದಿ) ಅನ್ನು ಕರ್ನಾಟಕ ಸರ್ಕಾರ ಒಪ್ಪುವವರೆಗೆ ಅನುಮೋದಿಸಬಾರದು ಎಂಬ ತಿದ್ದುಪಡಿಯೊಂದಿಗೆ ವಿಧಾನಸಭೆ ಅಂಗೀಕರಿಸಿದ್ದ ನಿರ್ಣಯವನ್ನು ವಿಧಾನ ಪರಿಷತ್ ಸಹ ಸರ್ವಾನುಮತದಿಂದ ಅಂಗೀಕರಿಸಿದೆ. ಕಲಾಪ ಪ್ರಾರಂಭ ಆಗುತ್ತಿದ್ದಂತೆ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ತೆಗೆದುಕೊಂಡಿದ್ದ ನಿರ್ಣಯಕ್ಕೆ ಖಂಡನಾ ನಿರ್ಣಯ ಮಂಡಿಸಲಾಯಿತು.
ಕಾನೂನು ಸಚಿವ ಮಾಧುಸ್ವಾಮಿ ಪರಿಷತ್‌ನಲ್ಲಿ ಈ ನಿರ್ಣಯ ಮಂಡಿಸಿದರು.ಸರ್ಕಾರದ ನಿರ್ಣಯ ಸ್ವಾಗತಿಸಿರುವ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ಸರ್ಕಾರದ ನಿರ್ಣಯವನ್ನು ಸರ್ವಾನುಮತದಿಂದ ಕಾಂಗ್ರೆಸ್ ಒಪ್ಪಿದೆ ಎಂದರು.
ಕ್ಷಮೆ ಕೋರಿದ ಸಭಾಪತಿ: ಮೇಕೆದಾಟು ವಿಚಾರವಾಗಿ ಖಂಡನಾ ನಿರ್ಣಯ ಅಂಗೀಕಾರ ಮಾಡುವಾಗ ಮಾತನಾಡಲು ಅವಕಾಶ ಕೊಡುವಂತೆ ಜೆಡಿಎಸ್ನ ಮರಿತಿಬ್ಬೇಗೌಡ ಒತ್ತಾಯಿಸಿದರು. ಆದರೆ, ಪ್ರತಿಪಕ್ಷ ನಾಯಕರು ಮಾತಾಡಿದ್ದಾರೆ, ಬೇರೆಯವರಿಗೆ ಅವಕಾಶ ಇಲ್ಲ ಎಂದು ಸಭಾಪತಿ ನಿರಾಕರಿಸಿದರು. ಇದಕ್ಕೆ ಕೋಪಗೊಂಡ ಮರಿತಿಬ್ಬೇಗೌಡ ಅವರು ಮಾತ್ರ ಮಾತಾಡಬೇಕಾ? ಜೆಡಿಎಸ್‌ನಿಂದ ಮಾತನಾಡುತ್ತೇನೆ ಎಂದರು. ಇದನ್ನು ಸಭಾಪತಿ ವಿರೋಧಿಸಿದರು. ಯಾವಾಗಲು ಎಲ್ಲದಕ್ಕೂ ವಿರೋಧ ಮಾಡ್ತೀಯಾ ನೀನು ಎಂದು ಆಕ್ರೋಶ ಹೊರ ಹಾಕಿದರು. ಈ ವೇಳೆ ಆಯ್ತು ಬಿಡಿ ನಾನು ಮಾತಾಡೋಲ್ಲ ಎಂದು ಸಭಾಪತಿಗಳ ಮೇಲೆ ಸಿಟ್ಟಾಗಿ ಕುಳಿತರು.
ಇದನ್ನೂ ಓದಿ:ತನ್ನ ಸ್ವರದಿಂದಲೇ ಕುಟುಂಬ ಸಾಕುತ್ತಿರುವ ದಿವ್ಯಾಂಗ..ಈ ಸ್ವಾಭಿಮಾನಿಯ ಪ್ರತಿಭೆಯನ್ನು ನೀವು ಒಮ್ಮೆ ನೋಡಿ
ಪ್ರಶ್ನೋತ್ತರ ಅವಧಿಯಾದ ಮೇಲೆ ಮರಿತಿಬ್ಬೇಗೌಡರಿಗೆ ಖಂಡನಾ ನಿರ್ಣಯದ ಬಗ್ಗೆ ಮಾತಾಡಲು ಸಭಾಪತಿಗಳು ಅವಕಾಶ ಕಲ್ಪಿಸಿದರು. ಈ ವೇಳೆ ಸಭಾಪತಿಗಳು ಅವಕಾಶ ಕೊಟ್ಟರು. ಆದರೆ, ಎಲ್ಲ ಮುಗಿದು ಹೋಗಿದೆ ನಾನು ಮತ್ತೆ ಮಾತನಾಡೋದಿಲ್ಲ ಎಂದು ಕೈ ಮುಗಿದು ಕುಳಿತರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿಗಳು ನಾನು ಆಗ ಕನ್ಫ್ಯೂಸ್ ಮಾಡಿಕೊಂಡಿದ್ದೆ. ಈಗ ಮಾತಾಡಿ ಎಂದರೂ ಮರಿತಿಬ್ಬೇಗೌಡ ಮಾತನಾಡಲು ಒಪ್ಪಲಿಲ್ಲ. ಕಡೆಗೆ ಸದಸ್ಯರ ಕ್ಷಮೆ ಕೋರಿ ಸಭಾಪತಿಗಳು ಮುಂದಿನ ಕಲಾಪ ಕೈಗೆತ್ತಿಕೊಂಡರು.