ಬೆಂಗಳೂರು : ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಿರುವುದನ್ನು ಪಕ್ಷಬೇಧ ಮರೆತು ವಿಧಾನಸಭೆಯಲ್ಲಿ ಇಂದು ಖಂಡಿಸಲಾಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ನ ಹಿರಿಯ ಸದಸ್ಯ ಹೆಚ್ ಕೆ ಪಾಟೀಲ್, ತಮಿಳುನಾಡು ಸರ್ಕಾರ ನಿರ್ಣಯವೊಂದನ್ನು ಕೈಗೊಂಡಿದೆ. ತಮಿಳುನಾಡು ಅನಗತ್ಯವಾಗಿ ಮೇಕೆದಾಟು ಯೋಜನೆಯಲ್ಲಿ ಅಡ್ಡಗಾಲು ಹಾಕುತ್ತಿದೆ.
ಮೇಕೆದಾಟು ಕುಡಿಯುವ ನೀರಿನ ಯೋಜನೆಯಾಗಿದ್ದು, ಇಂತಹ ವಿಚಾರದಲ್ಲೂ ದೊಡ್ಡದು ಮಾಡುತ್ತಿದೆ. ತಮಿಳುನಾಡು ವಿಧಾನಸಭೆ ನಿರ್ಣಯವನ್ನು ಖಂಡಿಸುವುದಾಗಿ ಹೇಳಿದರು.
ಮೇಕೆದಾಟು ಯೋಜನೆ ಆಗುವುದನ್ನು ತಡೆಯಲು ತಮಿಳುನಾಡಿನ ಕೆಟ್ಟ ಪ್ರವೃತ್ತಿಯ ನಿರ್ಣಯ ಕೈಗೊಂಡಿದ್ದು, ನಾವೇನು ಆ ರಾಜ್ಯದ ನೀರನ್ನು ಬಳಸಿಕೊಳ್ಳುತ್ತಿಲ್ಲ. ನಮ್ಮ ಪಾಲಿನ ನ್ಯಾಯಯುತ ಹಕ್ಕಿನ ನೀರನ್ನು ಬಳಸಿಕೊಳ್ಳುತ್ತಿದ್ದೇವೆ.
ನಮಗೆ ದೊರೆತಿರುವ ನ್ಯಾಯಯುತ ಹಕ್ಕಿನಲ್ಲಿ ನಮ್ಮ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಮೇಕೆದಾಟು ಯೋಜನೆ ಆಗುವುದನ್ನು ತಡೆಯುವ ಕೆಟ್ಟ ಪ್ರವೃತ್ತಿ ತಮಿಳುನಾಡಿದ್ದಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಸದನದಲ್ಲಿ ನಾವು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ತಮಿಳುನಾಡಿನ ನಿರ್ಣಯವನ್ನು ಕೇಂದ್ರವಾಗಲಿ, ನಾವಾಗಲಿ ಒಪ್ಪುವ ಅಗತ್ಯ ಇಲ್ಲ. ಅದರ ನಿರ್ಣಯಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ನಾನು ತಮಿಳುನಾಡು ನಿರ್ಣಯವನ್ನು ತೀವ್ರವಾಗಿ ಖಂಡಿಸ್ತೇನೆ. ಸಿಎಂ ತಕ್ಷಣ ದೆಹಲಿಗೆ ಹೋಗಿ, ನೀರಾವರಿ ಸಚಿವರನ್ನ ಭೇಟಿ ಮಾಡಿ, ಆದಷ್ಟು ಬೇಗ ಪರಿಸರ ಇಲಾಖೆಯ ಅನುಮತಿ ಪಡೆಯಲಿ ಎಂದು ಆಗ್ರಹಿಸಿದರು.
ನೆಲ-ಜಲ, ಭಾಷೆ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ :ಮೇಕೆದಾಟು ವಿಚಾರದಲ್ಲಿ ನಾವು ತಮಿಳುನಾಡಿನ ಮುಲಾಜಿನಲ್ಲಿಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಈ ಕುರಿತು ಸದನದಲ್ಲಿ ಅಭಿಪ್ರಾಯ ಸಂಗ್ರಹಿಸಿ ಕೇಂದ್ರದ ನೀರಾವರಿ ಸಚಿವರಿಗೆ ಕಳುಹಿಸಿಕೊಡುತ್ತೇವೆ ಎಂದರು. ತಮಿಳುನಾಡು ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡುತ್ತಲೇ ಇದೆ. ಈಗ ವಿಧಾನಸಭೆಯಲ್ಲೂ ನಿರ್ಣಯ ಮಾಡಿದ್ದಾರೆ. ಇದು ನಮಗೆ ಹೊಸದಲ್ಲ, ಹಲವು ಬಾರಿ ಈ ರೀತಿಯ ತೊಂದರೆ ಕೊಟ್ಟಿದ್ದಾರೆ ಎಂದರು.
ಈ ವಿಚಾರದ ಬಗ್ಗೆ ಸರ್ಕಾರ ಈಗಾಗಲೇ ಹೇಳಿದೆ, ಅವಶ್ಯಕತೆ ಇದ್ದರೆ ಪ್ರಧಾನಿ ಭೇಟಿ ಮಾಡಲಿ. ಅವರಿಗೆ ಮನವರಿಕೆ ಮಾಡಬೇಕು. ನಾವು ಕಾನೂನು ಬಾಹಿರ ಹಕ್ಕು ಕೇಂದ್ರದ ಬಳಿ ಕೇಳುತ್ತಿಲ್ಲ. ಸುಪ್ರೀಂಕೋರ್ಟ್ ನೀಡಿದ ಹಕ್ಕು ನಾವು ಕೇಳುತ್ತಿದ್ದೇವೆ ಎಂದು ಹೇಳಿದರು.
ತಮಿಳುನಾಡು ಸರ್ಕಾರ ತನ್ನ ವಿಧಾನಸಭೆಯಲ್ಲಿ ಯೋಜನೆ ವಿರುದ್ಧ ನಿರ್ಣಯ ಕೈಗೊಂಡಿದೆ. ನಮ್ಮ ಯೋಜನೆಗೆ ಅವರೇನು ನಿರ್ಣಯ ಮಾಡುವುದು. ಈ ಸಂಬಂಧ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಒಂದು ತೀರ್ಮಾನಕ್ಕೆ ಬಂದು ಕೇಂದ್ರದ ನೀರಾವರಿ ಸಚಿವರನ್ನು ಭೇಟಿ ಮಾಡಬೇಕಿದೆ ಎಂದು ಸಲಹೆ ನೀಡಿದರು.
ನೀರಾವರಿ ವಿಚಾರದ ಬಗ್ಗೆ ಸರ್ವಪಕ್ಷ ಸಭೆ ಆಗಿದೆ. ತಮಿಳುನಾಡು ಅಡ್ಡಗಾಲು ಹಾಕುವ ಪ್ರಯತ್ನ ನಮ್ಮ ಹಕ್ಕಿಗೆ ಚ್ಯುತಿ ಮಾಡಿದ್ದಾರೆ. ನಮ್ಮ ನಿಲುವನ್ನು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಕೇಂದ್ರ ಜಲ ಸಚಿವರಿಗೆ ತಿಳಿಸಿದ್ದಾರೆ. ಅಗತ್ಯ ಬಿದ್ದರೆ ಪ್ರಧಾನಿಯನ್ನೂ ಭೇಟಿ ಮಾಡುತ್ತಾರೆ. ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಪರಿಸರ ಇಲಾಖೆಯ ಅನುಮತಿ ತೆಗೆದುಕೊಂಡು ಬರಬೇಕಿದೆ ಎಂದರು.
ರಾಜ್ಯದ ಜಲ, ನೆಲ-ಭಾಷೆ ವಿಚಾರದಲ್ಲಿ ರಾಜಿ ಇಲ್ಲ :ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ತಮಿಳುನಾಡಿನ ನಿರ್ಣಯವನ್ನು ನಾವು ಖಂಡಿಸುತ್ತೇವೆ. ರಾಜ್ಯದ ಜಲ, ನೆಲ-ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗದ ರೀತಿ ತಮಿಳುನಾಡು ಮಾಡಿದೆ. ಪರಿಸರ ಇಲಾಖೆಯ ಅನುಮತಿ ಬೇಕಾಗಿದೆ. ತಮಿಳುನಾಡು ಒಂದಲ್ಲ ಒಂದು ಕೇಸ್ ಹಾಕುತ್ತಲೇ ಬರ್ತಾಯಿದೆ. ರಾಜಕೀಯಕ್ಕಾಗಿ ಮಾಡುತ್ತಿರುವುದನ್ನ ನಾನು ಖಂಡಿಸುತ್ತೇನೆ ಎಂದರು.
ಪರಿಸರ ಇಲಾಖೆ ಅನುಮತಿಗೆ ಪ್ರಯತ್ನಿಸುತ್ತಿದ್ದೇವೆ. ಕೇಂದ್ರಕ್ಕೆ ನಿಯೋಗ ಕರೆದೊಯ್ಯುವ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು. ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ಪ್ರತಿ ಸಲ ಪ್ರಚೋಧನೆ ಮಾಡಿದರೆ ಸುಮ್ಮನೇ ಇರೋಕ್ಕೆ ಆಗಲ್ಲ. ಇದಕ್ಕೆ ಪ್ರತಿಯಾಗಿ ತಮಿಳುನಾಡಿಗೆ ಕೌಂಟರ್ ಕೊಡುತ್ತೇವೆ ಎಂದರು.