ಬೆಂಗಳೂರು:ದಾವಣಗೆರೆಯಲ್ಲಿ ಮಾರ್ಚ್ 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೆಗಾ ರ‍್ಯಾಲಿ ನಡೆಯಲಿದೆ ಎಂದು ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಜೊತೆಗೆ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆ ಎದುರಿಸಲು ಪಕ್ಷ ಸಿದ್ಧವಾಗಿದೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ 4 ವಿಜಯ ಸಂಕಲ್ಪ ಯಾತ್ರೆಯನ್ನು ಮಾರ್ಚ್ ತಿಂಗಳಿನಲ್ಲಿ ಆರಂಭಿಸಲಾಗುವುದು. ಇದೇ ತಿಂಗಳಲ್ಲಿ ದಾವಣಗೆರೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಮೆಗಾ ರ‍್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ವಿವಿಧೆಡೆ ವಿಜಯ ಸಂಕಲ್ಪ ಯಾತ್ರೆ:ರಾಜ್ಯದ ನಾಲ್ಕು ಸ್ಥಳಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದೆ. ಮಾರ್ಚ್ 1ರಂದು ಮಲೆಮಹದೇಶ್ವರ ಬೆಟ್ಟ, ಹನೂರು ತಾಲೂಕಿನಿಂದ ಮೊದಲನೇ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಲಿದ್ದಾರೆ. ಮಾರ್ಚ್ 2ರಂದು ಸಂಗೊಳ್ಳಿ ರಾಯಣ್ಣ ಸ್ಮಾರಕ, ನಂದಗಢದಿಂದ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಚಾಲನೆ ದೊರೆಯಲಿದೆ. ನಂದಗಢದಿಂದ ಹೊರಡುವ ಯಾತ್ರೆಯು ಕಿತ್ತೂರು ಚೆನ್ನಮ್ಮನ ಹುಟ್ಟೂರಾದ ಕಿತ್ತೂರಿಗೂ ತೆರಳಲಿದೆ ಎಂದು ಹೇಳಿದರು.
ಯಾತ್ರೆಗೆ ಬರಲಿದ್ದಾರೆ ಹಲವು ಗಣ್ಯರು:ಮಾರ್ಚ್ 3ರಂದು ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳ, ಬಸವಕಲ್ಯಾಣ, ಬೀದರ್ ಜಿಲ್ಲೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಚಾಲನೆ ನೀಡಲಿದ್ದೇವೆ. ಅಲ್ಲದೇ ನಾಡಪ್ರಭು ಕೆಂಪೇಗೌಡ ಪ್ರತಿಮೆ, ದೇವನಹಳ್ಳಿ, ಬೆಂಗಳೂರಿನಿಂದ ಹೊರಡುವ ಯಾತ್ರೆಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಹಲವು ಮುಖಂಡರು 4 ಯಾತ್ರೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.