ಬೆಂಗಳೂರು: ಕೋವಿಡ್ ಬಳಿಕ ರಾಜ್ಯಮಟ್ಟದಲ್ಲಿ ನಡೆಸಿದ 3ನೇ ಲೋಕ ಅದಾಲತ್ನಲ್ಲಿ 3.32 ಲಕ್ಷ ಪ್ರಕರಣಗಳನ್ನು ಬಗೆಹರಿಸುವ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ದೇಶದಲ್ಲೇ ಹೊಸ ದಾಖಲೆ ಬರೆದಿದೆ.
ಈ ಕುರಿತು ಇಂದು ಸಂಜೆ ಮಾಧ್ಯಮಗೋಷ್ಠಿ ನಡೆಸಿದ ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮಾ.27ರಂದು ಏರ್ಪಡಿಸಿದ್ದ ಲೋಕ ಅದಾಲತ್ನಲ್ಲಿ ಒಟ್ಟು 3,32,936 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದೇವೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಇಷ್ಟು ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ದಾಖಲೆಯಾಗಿದೆ. ಈ ಸಾಧನೆಯ ಹಿಂದೆ ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಕೀಲರ ಶ್ರಮ ಮಹತ್ವದ್ದಾಗಿದೆ. ಹಾಗೆಯೇ ಕಕ್ಷಿದಾರರು ಕೂಡ ತಮ್ಮ ವ್ಯಾಜ್ಯ ಬಗೆಹರಿಸಿಕೊಳ್ಳಲು ಮುಂದಾಗಿದ್ದರಿಂದ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ ಎಂದರು.
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದ್ದು, ಬಾಕಿ ಉಳಿದಿದ್ದ 5,44,376 ಪ್ರಕರಣಗಳನ್ನು ಈ ಮೆಗಾ ಲೋಕ್ ಅದಾಲತ್ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿತ್ತು. ಅದರಂತೆ ಕಾರ್ಯಾರಂಭ ಮಾಡಿದ ಮೆಗಾ ಲೋಕ್ ಅದಾಲತ್ನಲ್ಲಿ 19,113 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿದ್ದ 3,13,823 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.