ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಗೆ ಶೇಕಡಾ 50 ರಷ್ಟು ದಂಡ ವಿಚಾರ ಸಂಬಂಧ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಂಚಾರ ಇಲಾಖೆಯೊಂದಿಗೆ ನಾಡಿದ್ದು ಸಭೆ ನಡೆಯಲಿದ್ದು ರಿಯಾಯಿತಿ ದಂಡ ಪಾವತಿ ವಿಸ್ತರಣೆ ಮಾಡುವ ಸಾಧ್ಯತೆಯಿದೆ. 44 ವಿವಿಧ ಬಗೆಯ ಟ್ರಾಫಿಕ್ ವೈಯಲೇಷನ್ ಸಂಬಂಧ ವಾಹನ ಸವಾರರಿಂದ ಶೇ.50 ರಷ್ಟು ರಿಯಾಯಿತಿ ನೀಡಿ ದಂಡ ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ಕಾನೂನು ಸೇವೆಗಳ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಒಪ್ಪಿಕೊಂಡ ರಾಜ್ಯ ಸರ್ಕಾರ ಫೆ. 3 ರಿಂದ 11ರವರೆಗೆ ದಂಡ ಪಾವತಿಸಿದರೆ ಶೇ50 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿತ್ತು.
ಆದೇಶ ಹೊರಬೀಳುತ್ತಿದ್ದಂತೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 9 ದಿನಗಳಿಂದ ನಡೆದ ದಂಡ ವಸೂಲಾತಿಯಲ್ಲಿ ನಿನ್ನೆ ಬುಹುಪಾಲು ಸಂಗ್ರಹಣೆ ಆಗಿದ್ದು ಬರುಬ್ಬರಿ 31 ಕೊಟಿ ದಂಡ ಕಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಒಂಬತ್ತು ದಿನದ ದಂಡ ಸಂಗ್ರಹಣೆ 100 ಕೋಟಿಯ ಕ್ಲಬ್ ಸೇರಿದೆ ಎಂದು ಟ್ವಿಟರ್ನಲ್ಲಿ ಪೊಲೀಸ್ ಇಲಾಖೆ ಮಾಹಿತಿ ಹಂಚಿಕೊಂಡಿದೆ.
50 ದಂಡ ಪಾವತಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಯೋಜನೆಯನ್ನು ಇನ್ನಷ್ಟು ದಿನಕ್ಕೆ ಮುಂದುವರೆಸುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಮಂಗಳವಾರ ನಡೆಯಲಿರುವ ಸಭಯ ಬಳಿಕ ತೀರ್ಮಾನ ಆಗಲಿದೆ. ಇನ್ನಷ್ಟು ಕೇಸ್ಗಳು ಬಾಕಿ ಇರುವ ಕಾರಣ ಅವಕಾಶ ಕಲ್ಪಿಸುವ ಸಾಧ್ಯತೆ ಹೆಚ್ಚಾಗಿದೆ.
ಆನ್ಲೈನ್ ವೇದಿಕೆಗಳಾದ ಫೋನ್ ಪೇ, ಪೇಟಿ ಎಂ, ಗೂಗಲ್ ಪೇ ಹಾಗೇ ಪೊಲೀಸ್ ಕಂಟ್ರೋಲ್ ರೂಂನ ವೆಬ್ ಮೂಕಲವೂ ದಂಡ ಪಾವತಿಗೆ ಅವಕಾಶ ಮಾಡಿಕೊಡಲಾಗಿತ್ತು. ಅದರಂತೆ ನಿನ್ನೆ ಒಂದು ದಿನ 9.45 ಲಕ್ಷ ಕೇಸ್ಗಳು ಇತ್ಯರ್ಥವಾಗಿದ್ದು, 31 ಕೋಟಿ ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಒಟ್ಟು 9 ದಿನದಲ್ಲಿ 41.20 ಲಕ್ಷ ಕೇಸ್ಗಳ ದಂಡ ಬಂದಿದ್ದು ಬರೋಬ್ಬರಿ 121 ಕೋಟಿ ಹಣ ಬೊಕ್ಕಸಕ್ಕೆ ಬಂದಿದೆ ಎನ್ನಲಾಗಿದೆ.
ಫೆಬ್ರವರಿ 2 ರಂದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಬಾಕಿ ಇರುವವರಿಗೆ ಶೇಕಡಾ 50 ವಿನಾಯಿತಿಯಲ್ಲಿ ದಂಡ ಪಾವತಿಗೆ ಅವಕಾಶ ನೀಡುವುದಾಗಿ ಸರ್ಕಾರ ಘೋಷಿಸಿದ ಬೆನ್ನಲ್ಲಿ ಮೊಲದ ದಿನ 7 ಕೋಟಿಯ ಭರ್ಜರಿ ಸಂಗ್ರಹವಾಗಿತ್ತು. ನಂತರದ ದಿನಗಳಲ್ಲಿ ದಂಡ ಸಂಗ್ರಹಣೆ ಹೆಚ್ಚಾಗುತ್ತಾ ಸಾಗಿತ್ತು.
ಒಂಬತ್ತು ದಿನದ ಸಂಗ್ರಹದ ವಿವರ:ಫೆಬ್ರವರಿ 3 ರಂದು 2.24 ಲಕ್ಷ ಪ್ರಕರಣ 7 ಕೋಟಿ ಸಂಗ್ರಹ, ಫೆ. 4 ರಂದು 3.9 ಲಕ್ಷ ಪ್ರಕರಣದಿಂದ 9 ಕೋಟಿ ಸಂಗ್ರಹ, ಫೆ. 5 ರಂದು 2.87 ಪ್ರಕರಣದಿಂದ 7.49 ಕೋಟಿ ಸಂಗ್ರಹ, ಫೆ. 6 ರಂದು 3.34 ಲಕ್ಷ ಕೇಸ್ನಿಂದ 9.57 ಕೋಟಿ ಮೊತ್ತ, ಫೆ. 7 ರಂದು 3.45 ಲಕ್ಷ ಕೇಸ್ನಿಂದ 9.70 ಕೋಟಿ ಸಂಗ್ರಹ, ಫೆ. 8 ರಂದು 3.87 ಲಕ್ಷ ಪ್ರಕರಣದಿಂದ 10.78 ಕೋಟಿ ಸಂಗ್ರಹ, ಫೆ. 9 ರಂದು 5.51 ಲಕ್ಷ ಕೇಸ್ ಇತ್ಯರ್ಥ 14.64 ಕೋಟಿ ಮೊತ್ತ ಸಂಗ್ರಹ, ಫೆ. 10 ರಂದು 6.70 ಲಕ್ಷ ಕೇಸ್ನಿಂದ 17.61 ಕೋಟಿ ಸಂಗ್ರಹ ಮತ್ತು ಫೆ 11 ರಂದು 9.45 ಲಕ್ಷ ಪ್ರಕರಣದಿಂದ 31.26 ಕೋಟಿ ಮೊತ್ತ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ 14,250 ರೂಪಾಯಿ ಸಂಚಾರ ದಂಡ ಪಾವತಿಸಿದ ಯುವಕ