ಬೆಂಗಳೂರು :ಶಾಲಾ ಹಂತದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಪ್ರಸ್ತುತತೆ, ಅಗತ್ಯತೆ ಬಗ್ಗೆ ದುಂಡು ಮೇಜಿನ ಸಮಾಲೋಚನಾ ಸಭೆಯು ಸೋಮವಾರ ಒಕ್ಕೊರೊಲಿನ ಅಭಿಪ್ರಾಯ ವ್ಯಕ್ತಪಡಿಸಿತು. ಶಾಲಾ ಹಂತದಲ್ಲಿ ಮೌಲ್ಯ ಶಿಕ್ಷಣದ ಅನುಷ್ಠಾನ ಕುರಿತು ಶಿಕ್ಷಣ ತಜ್ಞರು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಉನ್ನತ ಅಧಿಕಾರಿಗಳೊಂದಿಗೆ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ದುಂಡು ಮೇಜಿನ ಸಮಾಲೋಚನಾ ಸಭೆಯಲ್ಲಿ ಬಹುತೇಕ ಎಲ್ಲರೂ ಪ್ರಾಥಮಿಕ, ಪ್ರೌಢ ಶಾಲೆಗಳು, ಕಾಲೇಜು ವಿದ್ಯಾರ್ಥಿಗಳಿಗೂ ಮೌಲಿಕ ಶಿಕ್ಷಣ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಸಭೆಯಲ್ಲಿ ಸ್ವಾಮೀಜಿಗಳು, ಮುಸ್ಲಿಂ, ಕ್ರಿಶ್ಚಿಯನ್ ಮುಖಂಡರು, ಶಿಕ್ಷಣ ತಜ್ಞರು, ಶಾಸಕರು, ಸಚಿವರು ಪಾಲ್ಗೊಂಡಿದ್ದರು.
ಸಮಿತಿ ರಚನೆಗೆ ನಿರ್ಧಾರ: ಮಕ್ಕಳಿಗೆ ನೀಡಬೇಕಾದ ನೈತಿಕ ಶಿಕ್ಷಣ ಹೇಗಿರಬೇಕು ಎಂಬುದನ್ನು ಅಂತಿಮಗೊಳಿಸಿ ಅನುಷ್ಠಾನಕ್ಕೆ ತರಲು ಸಮಿತಿ ರಚಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಸಮಾಜದಲ್ಲಿ ಮೌಲ್ಯ ಕುಸಿತ ಉಂಟಾಗಿದೆ. ಶಿಕ್ಷಣದಲ್ಲಿ ಮಕ್ಕಳಿಗೆ ಮೌಲ್ಯ ಆಧಾರಿತ ಶಿಕ್ಷಣ ದೊರಕುತ್ತಿಲ್ಲ. ಸ್ವಾಮೀಜಿಗಳಿಂದ ಮೌಲ್ಯ ಆಧಾರಿತ ಶಿಕ್ಷಣ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಸುಮಾರು ವರ್ಷಗಳಿಂದ ಮೌಲ್ಯ ಆಧಾರಿತ ಶಿಕ್ಷಣವನ್ನು ಭಾರತ ನೀಡಿದೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಬೇಕು. ದೇಶದಲ್ಲಿ ಮೌಲ್ಯ ಕುಸಿಯುತ್ತಿದೆ. ಕುಟುಂಬದಿಂದ ಶುರುವಾಗಿ ಆ ಮಗು ಆಚೆ ಬಂದ ಮೇಲೆ ಮಠ ಮಂದಿರಗಳು ಮೌಲ್ಯಗಳನ್ನು ಕೊಡುತ್ತಿದ್ದವು. ಆದರೆ ಬೇರೆ ಬೇರೆ ಕಾರಣಗಳಿಂದ ಮೌಲ್ಯ ಕುಸಿಯುತ್ತಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಸಾತ್ವಿಕ ಆಹಾರ ಪೂರೈಕೆ ಬಗ್ಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಈ ಬಗ್ಗೆ ಯೋಚಿಸಿಲ್ಲ. ಆದರೆ, ಮಗುವಿನ ಬೆಳವಣಿಗೆ, ವರ್ತನೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಮುಂದಿನ ದಿನಗಳಲ್ಲಿ ಸಾತ್ವಿಕ ಆಹಾರದ ಬಗ್ಗೆ ಚಿಂತನೆ ನಡೆಸುತ್ತೇವೆ. ಆಹಾರದ ಬಗ್ಗೆ ರಾಜ್ಯ, ದೇಶ ಮಾತ್ರವಲ್ಲ ಪ್ರಪಂಚದಲ್ಲಿ ಚರ್ಚೆಯಾಗುತ್ತಿದೆ. ಮೊಟ್ಟೆ ಬದಿಗಿಡಿ, ಕೆಲವು ದೇಶಗಳು ಹಾಲು ನೀಡಬಾರದು ಎನ್ನುತ್ತಿವೆ. ಆಹಾರದ ವಿಷಯದಲ್ಲಿ ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯಗಳನ್ನು ಹೊಂದಿರುವುದು ಸಹಜ ಎಂದರು.
ಭಗವದ್ಗೀತೆ ವಿಚಾರ ಅಳವಡಿಕೆಗೆ ಸಲಹೆ: ಕೆಲವು ಮಠಾಧೀಶರು ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎಂಬ ಸಲಹೆ ನೀಡಿದರು. ಸೂತ್ತೂರು ಮಠದ ಸ್ವಾಮೀಜಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ನಮ್ಮ ದೇಶದಲ್ಲಿ ಶಿಕ್ಷಣದ ಗುಣಮಟ್ಟ ವಿಸ್ತಾರ ಆಗಲಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಮಕ್ಕಳು ದಾರಿ ತಪ್ಪಿದ್ದಾರೆ. ಮಕ್ಕಳಿಗೆ ಧಾರ್ಮಿಕತೆ- ನೈತಿಕತೆ ಬಗ್ಗೆ ಅವರ ಆಚರಣೆ ಮಾಡುವಾಗ ಗೊತ್ತಾಗಲಿದೆ. ಮಕ್ಕಳಿಗೆ ರಾಮಾಯಣ, ಭಗವದ್ಗೀತೆ ವಿಚಾರಗಳು ಹೇಳಬೇಕು. ಹೀಗಿನ ಮಕ್ಕಳು ಬೆಳಗ್ಗೆ ಎದ್ದರೆ ಮೊಬೈಲೇ ಅವರ ಬದುಕಾಗಿದೆ. ಎಲ್ಲೋ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ನೈತಿಕ ಶಿಕ್ಷಣ ತುಂಬ ಮುಖ್ಯವಾಗಿದೆ ಎಂದರು.
ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು : ಇದೇ ವೇಳೆ ಮಾತನಾಡಿದ ಮುಸ್ಲಿಂ ಮುಖಂಡ ಅಬ್ದುಲ್ ರಹೀಮ್, ಎಲ್ಲ ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ಬೇಕಿದೆ. ನಮ್ಮ ದೇಶ ವಿವಿಧ ಸಂಸ್ಕೃತಿಗಳ ನಾಡು. ಯೂನಿವರ್ಸಲ್ ಚಿಂತನೆಗಳನ್ನು ನಾವು ತರಬೇಕು. ಮೌಲ್ಯ ಶಿಕ್ಷಣ ಪ್ರಯೋಗಿಕವಾಗಿರಬೇಕು. ಪ್ರಾಯೋಗಿಕವಾಗಿ ಶಿಕ್ಷಣ ನೀಡುವುದು ಉತ್ತಮ. ಮೌಲ್ಯ ಶಿಕ್ಷಣ ಮನೆಯಿಂದ ಶುರುವಾಗಬೇಕು. ಮನೆಯಲ್ಲಿಯೇ ಮೌಲ್ಯಯುತ ಶಿಕ್ಷಣ ಸಿಗುವಂತೆ ಕಲಿಯುವಂತೆ ಇರಬೇಕು. ರಾಮಾಯಣದ ಕಥೆಯ ಮೂಲಕ ಮೌಲ್ಯಯುತ ಶಿಕ್ಷಣದ ಮಹತ್ವದ ತಿಳಿಸಿದರು.
ಮೊದಲು ರಾಜಕಾರಣಿಗಳಿಗೆ ನೈತಿಕ ಶಿಕ್ಷಣ ಅಗತ್ಯ: ಇದೇ ವೇಳೆ ಮಾತನಾಡಿದ ಸಿರಿಗೆರೆ ಶಿವಾಚಾರ್ಯ ಸ್ವಾಮೀಜಿ, ಮಕ್ಕಳಿಗಲ್ಲ ರಾಜಕಾರಣಿಗಳಿಗೆ ನೈತಿಕ ಶಿಕ್ಷಣ ಅಗತ್ಯವಿದೆ. ಶಿಕ್ಷಣದಲ್ಲಿ ಪರಿವರ್ತನೆ ಆಗಬೇಕಿದೆ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ಆಧ್ಯಾತ್ಮಿಕ, ವ್ಯಾವಹಾರಿಕ ಮೂರು ಶಿಕ್ಷಣ ನೀಡಬೇಕು. ಇಂದಿನ ಶಿಕ್ಷಣದಲ್ಲಿ ಔದ್ಯೋಗಿಕ ಹಾಗೂ ವ್ಯಾವಹಾರಿಕ ಶಿಕ್ಷಣ ಸಿಗುತ್ತಿದೆ. ಆದರೆ ಆಧ್ಯಾತ್ಮಿಕ ಶಿಕ್ಷಣ ಸಿಗುತ್ತಿಲ್ಲ.