ಬೆಂಗಳೂರು :ಮಾಜಿ ಸಚಿವ ಪಿ ಟಿ ಪರಮೇಶ್ವರ ನಾಯ್ಕ್ ಪುತ್ರನ ವಿವಾಹ ಸಮಾರಂಭದಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆಯಾಗಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೋವಿಡ್-19 ನಿಯಂತ್ರಣ ಕುರಿತ ಸಭೆ ನಂತರ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅದ್ದೂರಿ ಕಾರ್ಯಕ್ರಮ ನಡೆಸಿದ ಆರೋಪ ಕೇಳಿ ಬಂದಿದೆ. ವೈರಸ್ಗೆ ಶ್ರೀಮಂತರು, ಬಡವರು ಎನ್ನುವ ವ್ಯತ್ಯಾಸವಿಲ್ಲ. ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಎಲ್ಲರೂ ಕೂಡ ಎಚ್ಚರವಹಿಸಬೇಕು. ಎಲ್ಲದಕ್ಕೂ ಮಾರ್ಗಸೂಚಿ ರಚಿಸಲಾಗಿದೆ. ಕಾರ್ಯಕ್ರಮ ಮಾಡಲೂ ನಿಯಮ ಮಾಡಲಾಗಿದೆ. ಯಾರೇ ಆಗಲಿ ಮಾರ್ಗಸೂಚಿ ಪಾಲಿಸಲೇಬೇಕು. ಯಾರೇ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ 80 ಫೀವರ್ ಕ್ಲಿನಿಕ್ಗಳು ಕೆಲಸ ಮಾಡುತ್ತಿವೆ. ಎಲ್ಲಾ ಕಡೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಒಂದು ವೇಳೆ ನಮ್ಮ ಫೀವರ್ ಕ್ಲಿನಿಕ್ಗಳು ಕೆಲಸ ಮಾಡದಿದ್ರೆ ಲಕ್ಷಾಂತರ ಜನರ ಪರೀಕ್ಷೆ ಹೇಗೆ ಮಾಡಲಾಗುತ್ತಿತ್ತು. ನಾನೇ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿದ್ದೇನೆ ಎಂದು ಫೀವರ್ ಕ್ಲಿನಿಕ್ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಆರೋಪ ತಳ್ಳಿ ಹಾಕಿದರು. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಸುಲಿಗೆ ಮಾಡುವ ಬಗ್ಗೆ ಗಮನಕ್ಕೆ ಬಂದಿದೆ.