ಬೆಂಗಳೂರು :ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದ ಎಲ್ಲ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರೊಡನೆ ಯೋಜನೆಗಳು ತಲುಪಿರುವುದನ್ನು ಖಾತ್ರಿಪಡಿಸಲು ಮಾರ್ಚ್ 4 ರಿಂದ 20ರ ವರೆಗೆ ಸಮಾವೇಶ ನಡೆಸಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಆನಂದ್ ಸಿಂಗ್ ಜೊತೆಗೂಡಿ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಸಚಿವರು ಮಾತನಾಡಿದರು.
ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಫಲಾನುಭವಿಗಳೊಡನೆ ಸಮಾಲೋಚಿಸಿ ಜನಹಿತ ಚಿಂತನೆಗಳ ಜಾರಿಗೆ ಪ್ರಯತ್ನಿಸಲಾಗುತ್ತಿದೆ. ಅದರಂತೆ ಯೋಜನೆಗಳನ್ನು ಯೋಜಿಸಬೇಕೆಂಬ ಉದ್ದೇಶದೊಂದಿಗೆ ನಾವು ಪ್ರತೀ ಜಿಲ್ಲೆಯಲ್ಲೂ ಫಲಾನುಭವಿಗಳ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು. ಇದು ನಮ್ಮ ಸಾಧನೆಯ ಪ್ರದರ್ಶನವಲ್ಲ. ನಾಡಿನ ಜನತೆಗೆ ನಮ್ಮ ನಿಜವಾದ ಕಳಕಳಿಯಿಂದ ರೂಪಿತವಾದ ಯೋಜನೆಗಳು ಜನರನ್ನು ತಲುಪಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದಷ್ಟೇ ಉದ್ದೇಶ. ಈ ಮೂಲಕ ನಮ್ಮ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡುವುದೂ ಈ ಸಮಾವೇಶದ ಗುರಿ ಎಂದು ಹಾಲಪ್ಪ ಹೇಳಿದರು.
ಪಿಂಚಣಿ ಯೋಜನೆಗಳು:ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆ ಜಾರಿ ಮಾಡುವ ಮೂಲಕ 2.97 ಲಕ್ಷ ವಿದ್ಯಾರ್ಥಿಗಳಿಗೆ ರೂ.462.12 ಕೋಟಿ ರೂ ವಿದ್ಯಾರ್ಥಿ ವೇತನ ನೀಡಿದ್ದೇವೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮೈತ್ರಿ, ಮನಸ್ವಿನಿ, ವಿಕಲಚೇತನರ ಮಾಸಾಶನ ಹಾಗೂ ಆ್ಯಸಿಡ್ ದಾಳಿ ಸಂತ್ರಸ್ತರ ಯೋಜನೆಗಳ ಪಿಂಚಣಿ ಮೊತ್ತ ಹೆಚ್ಚಳ ಮಾಡಿದ್ದೇವೆ. ಇದು 75 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ. ಶ್ರಮಿಕ ವರ್ಗದವರಿಗೆ ಕಾರ್ಮಿಕ ಇಲಾಖೆಯಿಂದ 100 ಹೈಟೆಕ್ ಸಂಚಾರಿ ಕ್ಲಿನಿಕ್ ತೆರೆಯಲಾಗಿದೆ. ಗೃಹಿಣಿ ಶಕ್ತಿ ಯೋಜನೆಯ ಮೂಲಕ ಕೋವಿಡ್ ಹಾಗೂ ನೆರೆ ಸಂತ್ರಸ್ಥ ಕುಟುಂಬಗಳ ಮಹಿಳಾ ಮುಖ್ಯಸ್ಥೆಗೆ ಸಹಾಯಧನ ನೀಡುವ ಯೋಜನೆ ರೂಪಿಸಿದ್ದೇವೆ ಎಂದರು.
ಸಾಮಾಜಿಕ ನ್ಯಾಯ, ಸಮಾನ ಅಭಿವೃದ್ಧಿ, ಬಡವರ ಬಗ್ಗೆ ಇರುವ ನೈಜ ಕಳಕಳಿಯಿಂದಾಗಿ ರೂಪಿತಗೊಂಡ ನಮ್ಮ ಅವಿರತ ಪ್ರಯತ್ನಗಳನ್ನು ನಾಡು ಹಾಗೂ ತಮಗೆ ಪರಿಚಯಿಸುವ ಒಂದು ಸಣ್ಣ ಪ್ರಯತ್ನವಿದು. ಮಾರ್ಚ್ 4ರಿಂದ 20ರವರೆಗೆ ಪ್ರತಿ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 4ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶ ಉದ್ಘಾಟಿಸಲಿದ್ದಾರೆ.