ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಎಲ್ಲ ಸಂಸದರೂ ಮಹತ್ವದ ಪಾತ್ರ ವಹಿಸಬೇಕು, ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸಂಸದರಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಲ್ಲೇಶ್ವರ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಂಸದರ ಮಹತ್ವದ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಜಿ ಬಸವರಾಜು, ಜಿ ಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ, ಕೇಂದ್ರ ಸಚಿವ ಭಗವಂತ್ ಖೂಬಾ, ರಮೇಶ್ ಜಿಗಜಿಣಗಿ ಸೇರಿದಂತೆ ಸುಮಾರು 15 ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು.
ಚುನಾವಣೆಯಲ್ಲಿ ಸಂಸದರ ಪಾತ್ರ ಹೇಗಿರಬೇಕು ಎನ್ನುವ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಸಂಸದರಿಗೆ ಸೂಚನೆ ನೀಡಲಾಯಿತು. ಅಧಿವೇಶನದ ನಂತರ ಅಧಿಕೃತವಾಗಿ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರ ಕಾರ್ಯ ಆರಂಭಗೊಳ್ಳಲಿದ್ದು, ಸಂಸದರು ತಮ್ಮ ಪೂರ್ಣ ಸಮಯವನ್ನು ಪ್ರಚಾರಕ್ಕೆ ನೀಡಬೇಕು, ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕು ಎಂದು ಸೂಚಿಸಲಾಯಿತು.
ಪಕ್ಷ ಸೇರಿದವರಿಗೆ ಸ್ವಾಗತ ಕೋರಿದ ಕಟೀಲ್:ಸಂಸದರ ಸಭೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರನ್ನು ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಕಾಂಗ್ರೆಸ್ ವಿಚಾರಧಾರೆಯಲ್ಲಿ ಕೆಲಸ ಮಾಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಬೇಸರಗೊಂಡು ಬಿಜೆಪಿ ಸೇರ್ಪಡೆಗೊಂಡ ಎಲ್ಲರಿಗೂ ಸ್ವಾಗತ, ಒಂದು ಪಾರ್ಟಿಯಲ್ಲಿ ಹತ್ತಾರು ವರ್ಷ ಇದ್ದು ಬೇರೆ ಪಕ್ಷ ಸೇರಿದಾಗ ಆತಂಕ ಇರುತ್ತದೆ. ಆದರೆ ನೀವು ಇಲ್ಲಿ ಸುಧಾಕರ್, ಮುನಿರತ್ನ ಎಲ್ಲರನ್ನು ನೋಡಿದಾಗ ಗೊತ್ತಾಗುತ್ತದೆ, ಅವರು ಇಲ್ಲಿ ಎಷ್ಟು ಖುಷಿಯಾಗಿದ್ದಾರೆ ನೋಡಿ, ಇನ್ನೊಂದು ವರ್ಷದ ನಂತರ ನಿಮಗೂ ಆ ಅನುಭವ ಆಗಲಿದೆ ಎಂದರು.