ಬೆಂಗಳೂರು: ಕಳೆದ ವಾರ ರಾಜ್ಯಕ್ಕೆ ಭೇಟಿ ಕೊಟ್ಟಿದ್ದ ಪ್ರಧಾನಿ ಮೋದಿ ಅವರು ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ತರುವಂತೆ ಸೂಚನೆ ಕೊಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಕೂಡ ಕ್ರಮಕ್ಕೆ ಮುಂದಾಗಿದ್ದು, ನಿನ್ನೆ ರಾತ್ರಿ ಪೊಲೀಸ್ ಕಮಿಷನರ್, ಬಿಬಿಎಂಪಿ ಕಮಿಷನರ್, ಬಿಡಿಎ ಆಯುಕ್ತ, ಸಂಚಾರಿ ಜಂಟಿ ಆಯುಕ್ತ ಸೇರಿ ಹಲವು ಹಿರಿಯ ಅಧಿಕಾರಿಗಳು ಸಿಟಿ ರೌಂಡ್ಸ್ ಹಾಕಿದ್ರು.
ಹೆಬ್ಬಾಳ ಸೇರಿ ಟ್ರಾಫಿಕ್ ದಟ್ಟಣೆಯಾಗುವ ಸ್ಥಳ ಪರಿಶೀಲಿಸಿ ಹೇಗೆ ಟ್ರಾಫಿಕ್ ಸಮಸ್ಯೆ ನಿಯಂತ್ರಣ ಮಾಡಬಹುದೆನ್ನುವ ವರದಿ ಸಿದ್ಧಪಡಿಸಿದ್ದಾರೆ. ಪೊಲೀಸ್ ಇಲಾಖೆ ಕೂಡ ಒಂದು ವರದಿ ಸಿದ್ಧ ಮಾಡಿ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರಿಗೆ ನೀಡಿದ್ದಾರೆ. ಡಿಜಿ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರೂಲ್ಸ್, ಟೋಯಿಂಗ್, ಭದ್ರತೆ ಸೇರಿ ಹಲವು ವಿಚಾರಗಳ ಕುರಿತು ಇಂದು ಚರ್ಚೆ ಮಾಡಲಾಯಿತು. ಈ ಸಭೆ ಬಳಿಕ ಡಿಜಿ, ಐಜಿಪಿ ಪ್ರವೀಣ್ ಸೂದ್ ಪೊಲೀಸ್ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ.