ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಸಭೆ ಆರಂಭವಾಗಿದೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯುತಿದ್ದು, ಕೊರೊನಾ ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ರೋಗ ತಡೆ ಸಂಬಂಧ ರಾಜ್ಯ ಸರ್ಕಾರದಿಂದ ಸರಿಯಾದ ಕ್ರಮ ಆಗುತ್ತಿಲ್ಲ. ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಕಾಯಿಪಲ್ಯ, ಕಿರಾಣಿ ಅಂಗಡಿಗಳು ಬಂದ್ ಆಗುತ್ತಿಲ್ಲ. ಸರಿಯಾಗಿ ಜಾಗೃತಿ ಮೂಡಿಸುವ ಕಾರ್ಯವು ಆಗುತ್ತಿಲ್ಲ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಗಿದೆ.
ಮಾರಕ ರೋಗದ ವ್ಯಾಪಕ ಹರಡುವಿಕೆಗೆ ರಾಜ್ಯದಲ್ಲಿ ಗೋಚರಿಸುತ್ತಿದೆ. ರಾಜ್ಯದಲ್ಲಿ ಇದು ಮೂರನೇ ಹಂತ ತಲುಪಿರುವ ಸೂಚನೆ ಸಿಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಪಕ್ಷವಾದ ನಾವು ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಿದೆ. ಸರ್ಕಾರ ತಪ್ಪು ಹೆಜ್ಜೆಯನ್ನು ಇಡುತ್ತಿದ್ದು, ಅವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಾಗಿದೆ. ಸಮರೋಪಾದಿಯಲ್ಲಿ ಕ್ರಮಕೈಗೊಳ್ಳುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಹಿರಿಯರ ಸಲಹೆ ಪಡೆದು, ತಾವು ಸರ್ಕಾರಕ್ಕೆ ಮಾಹಿತಿ ಸಲ್ಲಿಸುವುದಾಗಿ ಶಿವಕುಮಾರ್ ಹಿರಿಯ ಕಾಂಗ್ರೆಸ್ ನಾಯಕರಿಗೆ ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ ಪಾಟೀಲ್, ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ಮತ್ತಿತರ ನಾಯಕರು ಪಾಲ್ಗೊಂಡಿದ್ದಾರೆ.