ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ಮುಕ್ತಾಗೊಂಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ನಾಯಕರು ಪಾಲ್ಗೊಂಡಿದ್ದರು. ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಗೈರು ಹಾಜರಾಗಿದ್ದರು.
ಒಟ್ಟು 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಇಂದು ಬೆಂಗಳೂರಿನಲ್ಲಿ 13 ಕ್ಷೇತ್ರಗಳಿಗೆ ಮಾತ್ರ ಸಭೆ ನಡೆಸಲಾಯಿತು. ನಿನ್ನೆ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಾದ ಕಾಗವಾಡ ಅಥಣಿ ಹಾಗೂ ಗೋಕಾಕ್ ಕ್ಷೇತ್ರದ ಮುಖಂಡರ ಸಭೆ ಅಲ್ಲಿಯೇ ಮುಗಿದಿರುವ ಹಿನ್ನೆಲೆ ಈ ಮೂರು ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳ ಮುಖಂಡರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಚರ್ಚಿಸಿದರು.
ಅಭ್ಯರ್ಥಿ ಆಯ್ಕೆ ಬಹುತೇಕ ಅಂತಿಮ ಹಂತದ ಮಾತುಕತೆ ಇಂದು ಮುಕ್ತಾಯವಾಗಿದ್ದು, ನಾಳೆ ನಗರದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಆಗಲಿದೆ. ಹೈಕಮಾಂಡ್ ಸಮ್ಮತಿ ಸಿಕ್ಕ ನಂತರ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲು ಪಕ್ಷ ತೀರ್ಮಾನಿಸಿದೆ.
ಸಭೆ ಬಳಿಕ ಮಾತನಾಡಿದ ಮಾಜಿ ಸ್ಪೀಕರ್ ಕೋಳೀವಾಡ್ ಅಭಿಪ್ರಾಯ ಸಂಗ್ರಹ:ಹಾವೇರಿ, ರಾಣೆಬೆನ್ನೂರು ಕ್ಷೇತ್ರದ ಮುಖಂಡರ ಸಭೆ ಮುಕ್ತಾಯದ ನಂತರ ಮಾತನಾಡಿದ ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ, ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಬಗ್ಗೆ ಎಲ್ಲರ ಅಭಿಪ್ರಾಯ ಕೇಳಿದ್ದಾರೆ. ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಎಲ್ಲರೂ ಒಟ್ಟಾಗಿಯೇ ಕೆಲಸ ಮಾಡುತ್ತೇವೆ. ರಾಣೆಬೆನ್ನೂರು ಟಿಕೆಟ್ ನನಗೆ ಸಿಗುವುದಾ ಅಥವಾ ಪುತ್ರನಿಗೆ ಸಿಗುವುದಾ ಎಂಬ ಬಗ್ಗೆ ಮಾಹಿತಿ ಇಲ್ಲ. ಯಾರಿಗೇ ಕೊಟ್ಟರೂ ತೊಂದರೆ ಇಲ್ಲ. ಚುನಾವಣೆ ಎದುರಿಸುತ್ತೇವೆ ಗೆಲ್ಲುವ ವಿಶ್ವಾಸ ಇದೆ ಎಂದರು.
ಅನರ್ಹ ಶಾಸಕರ ವಿಚಾರ ಪ್ರಸ್ತಾಪ: ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ವಿಚಾರಣೆ ವಿಚಾರ ಪ್ರಸ್ತಾಪಿಸಿ, ಸ್ಪೀಕರ್ ತಮ್ಮದೇ ನಿಯಮದಡಿ ಆದೇಶ ಮಾಡಿದ್ದಾರೆ. ಅನರ್ಹರು ಆದೇಶ ಚಾಲೆಂಜ್ ಮಾಡಿ ಪಿಟಿಷನ್ ಹಾಕಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ನಿರ್ಣಯ ಸರಿಯಿದೆ ಎನ್ನುವುದು ನನ್ನ ಅಭಿಪ್ರಾಯ ಎಂದರು.
ಇಂದು ಎಲ್ಲರ ಮಾಹಿತಿ ಸಂಗ್ರಹಿಸಿದ್ದೇವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಎಲ್ಲಾ ಆಕಾಂಕ್ಷಿಗಳನ್ನು ಇಂದು ಕರೆದು ವಿಚಾರಣೆ ಮಾಡಿದ್ದೇವೆ. ಅವರ ಅಭಿಪ್ರಾಯ ಪಡೆದುಕೊಂಡಿದ್ದೇವೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. ಯಾರೂ ಗಲಾಟೆ ಮಾಡಿಕೊಂಡಿಲ್ಲ. ನಾವು ಎಲ್ಲಾ ಒಟ್ಟಿಗೆ ಯಾರನ್ನು ಗುರುತಿಸುತ್ತೇವೋ ಅಂತಹ ವ್ಯಕ್ತಿಗೆ ಕಲಸ ಮಾಡಬೇಕು ಎಂದು ಹೇಳಿದ್ದೇವೆ. ಅದಕ್ಕೆ ಎಲ್ಲರು ಒಪ್ಪಿಕೊಂಡಿದ್ದಾರೆ ಎಂದರು.
ಇಂದು ವೇಣುಗೋಪಾಲ ಆಗಮನ: ಇವತ್ತು ಸಂಜೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬರುತ್ತಾರೆ. ನಮ್ಮ ಪ್ರಮುಖ ಮುಖಂಡರ ಜೊತೆಗೆ ಸಭೆ ನಡೆಯಲಿದ್ದು, ನಾಳೆ ಮತ್ತೊಂದು ಸಭೆ ಮಾಡಿ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗುವುದು ಎಂದರು.