ಬೆಂಗಳೂರು:ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯvr ಸೆವನ್ ಮಿನಿಸ್ಟರ್ ಕ್ವಾಟರ್ಸ್ ನಿವಾಸ ಇದೀಗ ಅನರ್ಹ ಶಾಸಕರ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿದೆ.
ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಅನರ್ಹ ಶಾಸಕರ ಸಭೆ ಇಂದು ಮಧ್ಯಾಹ್ನದ ಬಳಿಕ ಅನರ್ಹ ಶಾಸಕರುಗಳು ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿ, ಸುದೀರ್ಘ ಚರ್ಚೆ ನಡೆಸಿದ್ದಾರೆ. ಮುಂದಿನ ನಡೆ ಬಗ್ಗೆ ಅನರ್ಹ ಶಾಸಕರು ಸಮಾಲೋಚನೆ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಸಿಪಿ.ಯೋಗೇಶ್ವರ್, ಬಿಎಸ್ವೈ ಆಪ್ತ ಸಹಾಯಕ ಸಂತೋಷ್, ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿ ಅನರ್ಹ ಶಾಸಕರ ಜತೆ ಸಭೆ ನಡೆಸಿದರು. ಅನರ್ಹ ಶಾಸಕರಾದ ನಾರಾಯಣಗೌಡ, ಎಂಟಿಬಿ ನಾಗರಾಜ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿ ಮುಂದಿನ ಕಾರ್ಯತಂತ್ರ, ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು.
ನಮ್ಮ ಕ್ಷೇತ್ರದ ಕೆಲಸಗಳು ಆಗ್ತಿರಲಿಲ್ಲ:ನಮ್ಮ ಕ್ಷೇತ್ರದ ಕೆಲಸಗಳು ಆಗದೇ ಇರುತ್ತಿದ್ದ ಕಾರಣ ರಾಜೀನಾಮೆ ನೀಡಿದ್ದೇನೆ. ನಾನು ಹಣ, ಅಧಿಕಾರದ ಹಿಂದೆ ಹೋದವನಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ದೇವರು ನಮಗೆ ಸಾಕಷ್ಟು ಕೊಟ್ಟಿದ್ದಾನೆ ಎಂದು ಇದೇ ವೇಳೆ ಎಂಟಿಬಿ ನಾಗರಾಜ್ ಹೇಳಿದ್ದಾರೆ..
ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿದ್ದೇವೆ. ಅಲ್ಲಿ ವಿಚಾರಣೆಗೆ ಬರಬೇಕು, ತೀರ್ಪು ಪ್ರಕಟವಾಗಬೇಕು. ಆ ನಂತರ ಎಲ್ಲಿಗೆ ಹೋಗಬೇಕು, ಚುನಾವಣೆಗೆ ನಿಲ್ಲಬೇಕಾ ಅಂತ ಯೋಚಿಸುತ್ತೇನೆ. ನಾನು ನಿಲ್ಲಬೇಕಾ, ಪುತ್ರನನ್ನು ನಿಲ್ಲಿಸಬೇಕಾ ನೋಡ್ತೇವೆ. ಈಗ ಅದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಮೊದಲು ನ್ಯಾಯಾಲಯದ ತೀರ್ಮಾನ ಬರಲಿ. ಕಾಂಗ್ರೆಸ್ ಅವರು ಯಾವ ಮೀಟಿಂಗ್ ಬೇಕಾದರೂ ಮಾಡಲಿ ಎಂದು ತಿಳಿಸಿದರು.
ಗೌಡರ ಮನೆಯಲ್ಲೊಂದು ಸಿಂಡಿಕೇಟ್ ಇದೆ:
ಗೌಡರ ಮನೆಯಲ್ಲೊಂದು ಸಿಂಡಿಕೇಟ್ ಇದೆ. ಆ ಸಿಂಡಿಕೇಟನ್ನು ದೇವೇಗೌಡರ ಕುಟುಂಬ ಬೆಳೆಸಿದೆ. ನಾನು ಒಬ್ಬ ಶಾಸಕ ಹೋದರೆ ಕನಿಷ್ಟ ಒಂದು ಟೀ ಕೊಡಲ್ಲ ಎಂದು ಅನರ್ಹ ಶಾಸಕ ನಾರಾಯಣಗೌಡ ವಾಗ್ದಾಳಿ ನಡೆಸಿದರು. ಕೆ.ಆರ್.ಪೇಟೆಯಲ್ಲಿ ಅವರು ಯಾರನ್ನ ಬೇಕಾದ್ರೂ ನಿಲ್ಲಿಸಲಿ. ಅವರು ತುಂಬಾ ದೊಡ್ಡವರು. ಅವರು ಅಭ್ಯರ್ಥಿ ಹಾಕುವ ಬಗ್ಗೆ ನಾನು ಮಾತನಾಡಲ್ಲ. ನಾನೊಬ್ಬ ಒಕ್ಕಲಿಗ, ಮಹಾರಾಷ್ಟ್ರದಲ್ಲಿ ಉದ್ಯಮ ನಡೆಸುತ್ತೇನೆ. ಒಕ್ಕಲಿಗ ಸಮುದಾಯಕ್ಕೆ ಅಲ್ಲೊಂದು ಶಕ್ತಿ ತಂದಿದ್ದೇನೆ. ಒಬ್ಬ ಒಕ್ಕಲಿಗನನ್ನೇ ಅವರು ಬೆಳೆಸಲಿಲ್ಲ. ಕಿಡಿಗೇಡಿಗಳ ಗುಂಪಿನ ಮಾತು ಕೇಳಿ ನೋವು ಕೊಟ್ಟಿದ್ದಾರೆ. ತುಂಬಾ ಸಂತೋಷ ಏನು ಬೇಕಾದರೂ ಮಾಡಲಿ. ರಮೇಶ್ ಜಾರಕಿಹೊಳಿ ನಾವು ಸ್ನೇಹಿತರು. ಹೀಗಾಗಿ ಅವರನ್ನ ಭೇಟಿ ಮಾಡಿದ್ದೇನೆ ಅಷ್ಟೇ. ಬಿಜೆಪಿ ಸೇರುವಂತೆ ನಮಗೆ ಎಲ್ಲೂ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.