ಬೆಂಗಳೂರು:ಕಾಂಗ್ರೆಸ್ ಲಿಂಗಾಯತ ಮುಖಂಡ ಹಾಗೂ ಟಿಕೆಟ್ ಆಕಾಂಕ್ಷಿಗಳ ಸಭೆ ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿಯಿರುವ ಬಸವ ಸಮಿತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಭೆಯನ್ನು ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಮತ್ತು ಎಂ.ಬಿ ಪಾಟೀಲ್ ಆಯೋಜಿಸಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್, ಅಶೋಕ್ ಪಟ್ಟಣಶೆಟ್ಟಿ ಸೇರಿದಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳು: ಕಳೆದ ಬಾರಿ 48 ಸ್ಥಾನದಿಂದ ಟಿಕೆಟ್ ಪಡೆದಿದ್ದ ಕಾಂಗ್ರೆಸ್ ನಾಯಕರು ಈ ಬಾರಿ 65 ಸ್ಥಾನಗಳಿಗೆ ಬೇಡಿಕೆಯಿಡಲು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಪ್ರಬಲ ಸಮುದಾಯವಾದ ಲಿಂಗಾಯತರಿಗೆ 65 ಸೀಟುಗಳನ್ನು ನೀಡಬೇಕು. ಈಗಾಗಲೇ ಎಐಸಿಸಿಗೆ ಬೇಡಿಕೆ ಸಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರುವ ಅವಕಾಶ ಇದೆ. ರಾಜ್ಯದ ದೊಡ್ಡ ಮತದಾರರ ಸಮುದಾಯವಾದ ಲಿಂಗಾಯತರು ಈಗ ಬಿಜೆಪಿ ಕಡೆ ಇದ್ದಾರೆ. ಇವರನ್ನು ಕಾಂಗ್ರೆಸ್ನತ್ತ ಸೆಳೆಯಬೇಕಾದರೆ ನಮ್ಮವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಸಮುದಾಯದವರು ಅಭ್ಯರ್ಥಿಯನ್ನು ಗೆಲ್ಲಿಸಿಕೊಡುತ್ತಾರೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ಮತದಾರರಿಗೆ ಈ ಸಾರಿ ಕಾಂಗ್ರೆಸ್ ಬಗ್ಗೆ ಒಲವು ಇದೆ ಎನ್ನುವುದನ್ನು ಪಕ್ಷದ ಹೈಕಮಾಂಡ್ಗೆ ವಿವರಿಸಲು ಕೈ ನಾಯಕರು ನಿರ್ಧರಿಸಿದ್ದಾರೆ.
ವೀರಶೈವ, ಲಿಂಗಾಯತ ಸಮುದಾಯದಲ್ಲಿ 210 ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು, ಅದರಲ್ಲಿ ಸುಮಾರು 73 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಗೆಲ್ಲುವ ಸಾಧ್ಯತೆ ಜಾಸ್ತಿ ಇರುವ ಆಕಾಂಕ್ಷಿಗಳಿಗೆ ಹೆಚ್ಚು ಒತ್ತು ನೀಡಲು ಚರ್ಚೆಯಾಗಿದೆ. ಎಲ್ಲಾ ಒಳಪಂಗಡಗಳನ್ನು ಸೇರಿಸಿ ಕಾಂಗ್ರೆಸ್ಗೆ ಉತ್ತಮವಾದ ಗೆಲ್ಲುವ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಲಿಂಗಾಯತ, ವೀರಶೈವದ ಎಲ್ಲಾ ಪಂಗಡಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಹಿರಿಯ ಮುಖಂಡರು ಶೀಘ್ರದಲ್ಲೇ ಪಟ್ಟಿ ತಯಾರಿಸಿ ಹೈಕಮಾಂಡ್ ಮತ್ತು ಉಸ್ತುವಾರಿಗಳ ಗಮನ ಸೆಳೆಯುವ ಕುರಿತು ಚರ್ಚೆಯಾಗಿದೆ. ಎಐಸಿಸಿ ಮಟ್ಟದಲ್ಲೂ ಕೂಡ ಸಮುದಾಯದ ನಾಯಕರಿಗೆ ಉತ್ತಮ ಸ್ಥಾನಮಾನಗಳನ್ನು ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದನ್ನೂ ಓದಿ:ಅಭ್ಯರ್ಥಿಗಳ ಆಯ್ಕೆ ಕಸರತ್ತು.. ಮುಂದುವರಿದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ