ಬೆಂಗಳೂರು: ಡಿಸೆಂಬರ್ 5ರಂದು 15 ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಗೆಲುವಿನ ತಂತ್ರಗಾರಿಕೆ ಕುರಿತು ಸಿಎಂ ಬಿಎಸ್ವೈ ಮಹತ್ವದ ಸಭೆ ನಡೆಸಿದರು. ಈ ವೇಳೆ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಆಗಮಿಸಿದ್ದು, ಜೆಡಿಎಸ್ ಸಂದೇಶ ಹೊತ್ತು ಬಂದರಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸ ಧವಳಗಿರಿಯಲ್ಲಿ ಚುನಾವಣಾ ಉಸ್ತುವಾರಿಗಳು, ಅಭ್ಯರ್ಥಿಗಳ ಜೊತೆ ಸಿಎಂ ಸಭೆ ನಡೆಸಿದರು. ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್, ಸಚಿವರಾದ ಮಾಧುಸ್ವಾಮಿ, ಸಚಿವ ವಿ.ಸೋಮಣ್ಣ ಜೊತೆ ಸಿಎಂ ಚರ್ಚೆ ನಡೆಸುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಪ್ರಚಾರ ಹಾಗೂ ಚುನಾವಣಾ ರಣತಂತ್ರದ ಬಗ್ಗೆ ಚರ್ಚೆ ನಡೆಸಿದರು.
ಮಹಾಲಕ್ಷ್ಮಿ ಲೇಔಟ್ ಚುನಾವಣಾ ಉಸ್ತುವಾರಿ ಹೊತ್ತಿರುವ ಸಚುವ ವಿ.ಸೋಮಣ್ಣ ಮಹಾಲಕ್ಷ್ಮಿ ಲೇಔಟ್ನ ಬಂಡಾಯ ಶಮನದ ಬಗ್ಗೆ ಸಿಎಂ ಬಿಎಸ್ವೈಗೆ ಮಾಹಿತಿ ನೀಡಿದರು. ಬೆಳಗ್ಗೆ ಮಹಾಲಕ್ಷ್ಮಿ ಲೇಔಟ್ನಲ್ಲಿ ಅಭ್ಯರ್ಥಿ ಗೋಪಾಲಯ್ಯ ಹಾಗೂ ಸ್ಥಳೀಯ ಕಮಲ ಮುಖಂಡರ ಜೊತೆ ಸಭೆ ನಡೆಸಿದ್ದ ಸೋಮಣ್ಣ ಇದೀಗ ಸಭೆ ಬಗ್ಗೆ ಸಿಎಂ ಬಿಎಸ್ವೈಗೆ ಮಾಹಿತಿ ನೀಡಿದರು. ನಂತರ ಮಹಾಲಕ್ಷ್ಮಿ ಲೇಔಟ್ನಲ್ಲಿ ಗೆಲ್ಲುವ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲಾಯಿತು.
ಇದರ ಜೊತೆಯಲ್ಲಿಯೇ ಶಿವಾಜಿನಗರ ಕ್ಷೇತ್ರದ ಕುರಿತೂ ಸಭೆ ನಡೆಸಲಾಯಿತು. ಮೊದಲು ಅನರ್ಹ ಶಾಸಕ ರೋಷನ್ ಬೇಗ್ರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ ಸಿಎಂ, ನಂತರ ಬಿಜೆಪಿ ಅಭ್ಯರ್ಥಿ ಶರವಣರನ್ನು ಕರೆಸಿಕೊಂಡು ಸಭೆ ನಡೆಸಿದರು.