ಕರ್ನಾಟಕ

karnataka

ETV Bharat / state

ಬರ ಪರಿಹಾರದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ: ಹೆಚ್​ ಕೆ ಪಾಟೀಲ್ - ಸಚಿವ ಸಂಪುಟ ಸಭೆ

Cabinet meeting Decisions: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಬರ ಪರಿಹಾರ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

Law Minister H.K. Patil
ಕಾನೂನು ಸಚಿವ ಹೆಚ್.ಕೆ. ಪಾಟೀಲ್

By ETV Bharat Karnataka Team

Published : Nov 9, 2023, 10:15 PM IST

Updated : Nov 9, 2023, 10:58 PM IST

ಕಾನೂನು ಸಚಿವ ಹೆಚ್.ಕೆ. ಪಾಟೀಲ್

ಬೆಂಗಳೂರು: ಬರ ಪರಿಹಾರಕ್ಕೆ ಕೇಂದ್ರದಿಂದ ಸ್ಪಂದಿಸದೇ ಇರುವ ಬಗ್ಗೆ ಸಚಿವ ಸಂಪುಟದಲ್ಲಿ ಕಳವಳ ವ್ಯಕ್ತವಾಗಿದ್ದು, ಸಚಿವರು ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ತೆರಳಿ ಬರ ಪರಿಸ್ಥಿತಿ, ನಿರ್ವಹಣೆ ಬಗ್ಗೆ ಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಇಂದಿನವರೆಗೆ ಕೇಂದ್ರ ಸರ್ಕಾರದಿಂದ ನಯಾ ಪೈಸೆ ಬರ ಪರಿಹಾರ ಬಂದಿಲ್ಲ. ಸಂಪುಟ ಸಭೆಯಲ್ಲಿ ಬರದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ನರೇಗಾ ದಡಿ ನೂರು ದಿನ ಕೆಲಸ ಮುಗಿಸಿದ ಕುಟುಂಬ ಬಹಳಷ್ಟು ಇದೆ. ಮಾನವ ದಿನಗಳನ್ನು 150 ಏರಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೂಡಲೇ ಮಾನವ ದಿನವನ್ನು 150ಕ್ಕೆ ಏರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಬರ ನಿರ್ವಹಣೆ ಹಾಗೂ ಮಾನವ ದಿನ ವೃದ್ಧಿಸುವ ಸಂಬಂಧ ಕೇಂದ್ರಕ್ಕೆ ಮನವಿ ಕೊಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂಗೆ ಪ್ರಧಾನಿ ಭೇಟಿಗೆ ಸಮಯ ನೀಡಿಲ್ಲ. ಕಂದಾಯ ಸಚಿವರಿಗೆ ಸಮಯಾವಕಾಶ ನೀಡಿಲ್ಲ. ಕೇಂದ್ರದ ಬರ ಅಧ್ಯಯನ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ತಮ್ಮ ವರದಿ ನೀಡಿದ್ದಾರೆ.

ಆದರೆ, ಇಂದಿನವರೆಗೆ ಕೇಂದ್ರ ಸರ್ಕಾರ ನಯಾ ಪೈಸೆ ಬರ ಪರಿಹಾರ ಕೊಟ್ಟಿಲ್ಲ. ಇದಕ್ಕೆ ತೀವ್ರ ಕಳವಳ ವ್ಯಕ್ತವಾಯಿತು. ರಾಜ್ಯಕ್ಕೆ ಅನ್ಯಾಯವಾಗದಂತೆ ಕೇಂದ್ರಕ್ಕೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಮಲತಾಯಿ ಧೋರಣೆಗೆ ತೀವ್ರ ತರದ ಅಭಿಪ್ರಾಯ ವ್ಯಕ್ತವಾಯಿತು. ಈಗಾಗಲೇ ಸುಮಾರು 790 ಕೋಟಿ ಡಿಸಿಗಳ ಪಿಡಿ ಖಾತೆಯಲ್ಲಿ ಇದೆ. ಮೇವು, ಬರ ನಿರ್ವಹಣೆಗೆ ಯಾವುದೇ ಅಡ್ಡಿ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಸಚಿವರು ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ತೆರಳಿ ತಿಂಗಳೊಳಗೆ ಪರಿಶೀಲನೆ ನಡೆಸುವಂತೆ ಸಿಎಂ ಸೂಚಿಸಿದರು. ರೈತರ ಬೆಳೆ ನಷ್ಟಕ್ಕೆ ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಲು ಕಾರ್ಯಕ್ರಮ ರೂಪಿಸಬೇಕು. ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಡಿ. 4ರಿಂದ ಬೆಳಗಾವಿ ಅಧಿವೇಶನ: ಡಿ. 4ರಿಂದ ಬೆಳಗಾವಿಯಲ್ಲಿ 10 ದಿನಗಳ ಕಾಲ ಕಲಾಪ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು. ಡಿ. 4ರಿಂದ ಡಿ. 15ರ ವರೆಗೆ ಅಧಿವೇಶನ ನಡೆಯಲಿದೆ ಎಂದರು.

ಮುಖ್ಯ ಕಾರ್ಯದರ್ಶಿ ನೇಮಕ ಅಧಿಕಾರ ಸಿಎಂಗೆ: ಪ್ರಸಕ್ತ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರ ಕಾಲಾವಧಿ ಈ ತಿಂಗಳು ಕೊನೆಯಾಗಲಿದೆ. ಹೊಸ ಮುಖ್ಯ ಕಾರ್ಯದರ್ಶಿ ಆಯ್ಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಸಂಪುಟ ಸಭೆಯಲ್ಲಿ ಜೇಷ್ಠ ಐಎಎಸ್ ಅಧಿಕಾರಿಗಳ ಹೆಸರುಗಳ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಿಎಂಗೆ ಅಧಿಕಾರ ನೀಡಲಾಯಿತು ಎಂದು ಸಚಿವರು ತಿಳಿಸಿದರು.

ಆಕಾಂಕ್ಷಿಗಳ ಪಟ್ಟಿಯಲ್ಲಿ ರಜನೀಶ್ ಗೋಯೆಲ್, ವಿ. ಮಂಜುಳಾ, ಅಜಯ್ ಸಿಂಗ್, ಜಾವೇದ್ ಅಕ್ತಾರ್, ಎಲ್ ಕೆ ಅತೀಕ್, ಶಾಲಿನಿ ರಜನೀಶ್ ವಿದ್ಯಾವತಿ, ಉಮಾ ಮಹಾದೇವಮ್, ತುಷಾರ್​ ಗಿರಿನಾಥ್ ಸೇರಿ ಇತರ ಹಿರಿಯ ಐಎಎಸ್ ಅಧಿಕಾರಿಗಳ ಹೆಸರುಗಳಿವೆ ಎಂದರು.

ಜನನ, ಮರಣ ನೋಂದಣಿ ತಿದ್ದುಪಡಿಗೆ ಅನುಮೋದನೆ: ಕರ್ನಾಟಕ ಜನನ ಮರಣ ನೋಂದಣಿ ತಿದ್ದುಪಡಿ 2023 ನಿಯಮಗಳಿಗೆ ಒಪ್ಪಿಗೆ ನೀಡಲಾಹಿದೆ. ಪ್ರಸ್ತುತ ವಿಳಂಬಿತ ಜನನ ಮರಣ ನೋಂದಣಿ ಮಾಡಲು ಕೋರ್ಟ್​ಗೆ ಹೋಗಬೇಕಾಗಿತ್ತು. ತಿದ್ದುಪಡಿಯಂತೆ ಸಹಾಯಕ ಆಯುಕ್ತರಿಗೆ ಆ ನೋಂದಣಿ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ. ಈ ಮುಂಚೆ ಮ್ಯಾಜಿಸ್ಟ್ರೇಟ್​ಗೆ ಈ ಅಧಿಕಾರ ಇತ್ತು.

ಜನನ, ಮರಣ ನೋಂದಣಿ ನಿಯಮಗಳು 1999 ಪ್ರಕಾರ ವಿಳಂಬ ಜನನ, ಮರಣ ನೋಂದಣಿಗೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ವಿಳಂಬ ಶುಲ್ಕವನ್ನು ಪರಿಷ್ಕರಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಜನನ ಮರಣ ಘಟಿಸಿದ 21 ದಿನಗಳ ನಂತರ ಹಾಗೂ 30 ದಿನಗಳೊಳಗಾಗಿ ನೋಂದಾಯಿಸುವ ವಿಳಂಬ ನೋಂದಣಿಗೆ ಶುಲ್ಕವನ್ನು 2 ರೂ. ನಿಂದ 100 ರೂ. ಹೆಚ್ಚಳ ಮಾಡಲಾಗಿದೆ.

ಜನನ ಮರಣ ಘಟಿಸಿದ 30 ದಿನಗಳ ನಂತರ ಹಾಗೂ 1 ವರ್ಷದೊಳಗೆ ನೋಂದಾಯಿಸುವ ವಿಳಂಬ ನೋಂದಣಿ ಶುಲ್ಕವನ್ನು 5 ರೂ.‌ನಿಂದ 200 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಜನನ ಮರಣ ಘಟಿಸಿದ ಒಂದು ವರ್ಷದ ನಂತರ ನೋಂದಾಯಿಸಿದ ನೊಂದಣಿ ಶುಲ್ಕವನ್ನು 10 ರೂ. ನಿಂದ 500 ರೂ.ಗೆ ಹೆಚ್ಚಳ ಮಾಡಲಾಗಿದೆ.

ಇತರ ಪ್ರಮುಖ ತೀರ್ಮಾನಗಳೇನು?:

  • ಕೃಷಿ ಹೊಂಡ ನಿರ್ಮಾಣ, ಹೊಂಡದಿಂದ‌ ನೀರೆತ್ತಲು ಪಂಪ್ ಸೆಟ್, ಲಘು ನೀರಾವರಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳುವ ಕೃಷಿ ಭಾಗ್ಯ ಯೋಜನೆ ಮತ್ತೆ ಆರಂಭಕ್ಕೆ ನಿರ್ಧಾರ. 106 ತಾಲೂಕಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ
  • ಪ್ರಧಾನಮಂತ್ರಿ ಕೃಷಿ ಸಿಂಚಾಯ ಯೋಜನೆಯಡಿ 5 ತಾಲೂಕಿನಲ್ಲಿ ಜಾರಿಗೆ ಅಸ್ತು. 2025-26 ಸಾಲಿನ‌ ಅವಧಿಯಲ್ಲಿ 15,000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಟಾನ.‌ ಒಟ್ಟು 38 ಕೋಟಿ ರೂ. ವೆಚ್ಚದ ಯೋಜನೆಗೆ ಶೇ. 60:40 ಅನುಪಾತದಲ್ಲಿ ರಾಜ್ಯ ಸರ್ಕಾರ 15.25 ಕೋಟಿ ರೂ. ವೆಚ್ಚ ಭರಿಸಲಿದೆ.
  • ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಗೆ ಕ್ಲಸ್ಟರ್ ವಿಮಾ ಕಂಪನಿ ನಿಗದಿ ಮಾಡಲು ಘಟನೋತ್ತರ ಅನುಮೋದನೆ. ಈಗಾಗಲೇ 10 ಕ್ಲಸ್ಟರ್​ಗಳನ್ನು ಮಾಡಲಾಗಿದೆ. ರೈತರಿಗೆ ವಿಮೆ ಸರಿಯಾಗಿ ತಲುಪುತ್ತಿಲ್ಲ ಎಂದು ಶಾಸಕರಿಂದ ಆಕ್ಷೇಪ ಇತ್ತು. ಸರ್ವೇಯನ್ನು ರೈತರು ಒಪ್ಪುತ್ತಿಲ್ಲ. ಈ ಸಂಬಂಧ ಡಿಸಿಗೆ ಸರ್ವೇ ಮೇಲೆ ನಿಗಾ ಇಡಲು ಸೂಚನೆ
  • ಕೃಷಿಯಂತ್ರಧಾರೆ ಕೇಂದ್ರ ಬಲಪಡಿಸಲು ಹೈಟೆಕ್ ಹಾರ್ವೇಸ್ಟರ್ ಹಬ್ ಸ್ಥಾಪನೆ. 300 ಹೈಟೆಕ್ ಹಾರ್ವೆಸ್ಟ್‌ ಹಬ್​ಗಳನ್ನು ಹಂತ ಹಂತವಾಗಿ ಸ್ಥಾಪನೆಗೆ ತೀರ್ಮಾನ. ಹಬ್​ಗಳಿಗೆ 1 ಕೋಟಿ ರೂ. ಗ್ರಾಂಟ್ ಅನ್ನು ಕೊಡಲು ತೀರ್ಮಾನ.
  • ರಾಜ್ಯಪಾಲರ ಸಚಿವಾಲಯದ ಸರ್ಜನ್ ಹುದ್ದೆಗೆ ಡಾ. ನವೀನ್ ಕುಮಾರ್ ನೇಮಕ ಒಂದು ವರ್ಷ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮುಂದುವರಿಸಲು ನಿರ್ಧಾರ
  • ಕನಕಪುರ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ತೀರ್ಮಾನ. ಇನ್ಫೊಸಿಸ್ ಸಂಸ್ಥೆ ಸಿಎಸ್​ಆರ್​ ನಡಿ ಬೃಹತ್ ಕಟ್ಟಡ ನಿರ್ಮಿಸಿದ್ದಾರೆ. ಇದಕ್ಕಾಗಿ ಒಟ್ಟು 10.38 ಕೋಟಿ ರೂ. ವೆಚ್ಚ ಭರಿಸಲು ಆಡಳಿತಾತ್ಮಕ ಅನುಮೋದನೆ.
  • ಲೋಕಾಯುಕ್ತ ಟ್ರಾಪ್​ಗೆ ಒಳಗಾಗಿದ್ದ ಆರೋಗ್ಯ ಇಲಾಖೆಯ ಡಾ. ನಾಗಮಣಿಗೆ ಕಡ್ಡಾಯ ಸೇವಾ ನಿವೃತ್ತಿಗೆ ತೀರ್ಮಾನ
  • ಮಹತ್ವಾಕಾಂಕ್ಷೆ ತಾಲೂಕುಗಳ 73 kps ಶಾಲೆಗಳು ಹಾಗೂ 50 ಆದರ್ಶ ಶಾಲೆಗಳಲ್ಲಿ 20 ಕೋಟಿ ವೆಚ್ಚದಲ್ಲಿ ಆವಿಷ್ಕಾರ ಇನ್ನೋವೇಟಿವ್ ಲ್ಯಾಬ್​ಗಳ ಸ್ಥಾಪನೆಗೆ ಅಸ್ತು.
  • ನ.26ರ ರಂದು ಸಂವಿಧಾನ ದಿನಾಚರಣೆ ಮತ್ತು ರಾಷ್ಟ್ರೀಯ ಏಕತೆ ಸಮಾವೇಶವಾಗಿ ಆಚರಿಸಲು ಸಮಾಜ ಕಲ್ಯಾಣ ಇಲಾಖೆಗೆ 18 ಕೋಟಿ ರೂ. ನೀಡಲು ಒಪ್ಪಿಗೆ
  • ವಾಯುವ್ಯ ಸಾರಿಗೆಯಲ್ಲಿ 4 ಡೀಸೆಲ್ ಎಸಿ ಬಸ್ ಹಾಗೂ 20 ವ್ಹೀಲ್ ಬೇಸ್ ಡಿಸೆಲ್ ವಾಹನ ಖರೀದಿಗಾಗಿ 16.20 ಕೋಟಿ ವೆಚ್ಚದಲ್ಲಿ ಬಸ್​ಗಳ ಖರೀದಿ
  • ಹುಬ್ಬಳ್ಳಿ ಬಿಆರ್​ಟಿಗೆ 45 ಕೋಟಿ ರೂ. ವೆಚ್ಚದಲ್ಲಿ 100 ಬಸ್ ಖರೀದಿಗೆ ಒಪ್ಪಿಗೆ
  • ಪೋಷಣ್ ಅಭಿಯಾನಕ್ಕೆ 26.60 ಕೋಟಿ ರೂ. ವೆಚ್ಚದಲ್ಲಿ ಉಪಕರಣಗಳ ಖರೀದಿ.
  • ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಬಾಗಲಕೋಟೆಯ ರನ್ನ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಆರಂಭಿಸಲು ಬಿಡಿಸಿಸಿ ಅಥವ ಅಪೆಕ್ಸ್ ಬ್ಯಾಂಕ್​ನಿಂದ 40 ಕೋಟಿ ಸಾಲ ಪಡೆಯಲು ಸರ್ಕಾರದ ಖಾತರಿ ಕೊಡಲು ಒಪ್ಪಿಗೆ

ಇದನ್ನೂ ಓದಿ:ಹೆಚ್​ಡಿಕೆ ತೋಟದ ಮನೆಗೆ ಇಸ್ರೇಲ್ ಕಾನ್ಸುಲೇಟ್ ಜನರಲ್ ಭೇಟಿ: ಹಲವು ವಿಚಾರಗಳ ಬಗ್ಗೆ ಚರ್ಚೆ

Last Updated : Nov 9, 2023, 10:58 PM IST

ABOUT THE AUTHOR

...view details