ಬೆಂಗಳೂರು: ಮಾರ್ಚ್ನಲ್ಲಿ ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ ಸುರಕ್ಷತಾ ಕ್ರಮಗಳ ಕುರಿತು ಗೃಹ ಇಲಾಖೆಯ ಮುಖ್ಯಕಾರ್ಯದರ್ಶಿ, ಪೊಲೀಸ್ ಇಲಾಖೆ, ಸೈಬರ್ ಕ್ರೈಂ, ಸಿಡಿಎಂಎ, ಗುಪ್ತಚರ ಇಲಾಖೆ, ಖಜಾನೆ ಅಧಿಕಾರಿಗಳೊಂದಿಗೆ ಸಚಿವ ಎಸ್. ಸುರೇಶ್ ಕುಮಾರ್ ಇಂದು ಸಭೆ ನಡೆಸಿದರು.
ಸಚಿವ ಎಸ್.ಸುರೇಶ್ ಕುಮಾರ್ ಹೇಳಿಕೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಯುವ ಪಿಯುಸಿ-ಎಸ್ಎಸ್ಎಲ್ಸಿ ಪರೀಕ್ಷೆಗೆ ಇಲಾಖೆಗಳು ಸಜ್ಜಾಗಿದ್ದು, ಈ ಬಾರಿ ಹೆಚ್ಚಿನ ನಿಗಾ ವಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಮಾರ್ಚ್ನಿಂದ ಪಿಯು ಪರೀಕ್ಷೆ ಆರಂಭವಾಗಲಿದ್ದು, ಈ ಬಾರಿ ಮಕ್ಕಳಷ್ಟೇ ಅಲ್ಲದೇ ಶಿಕ್ಷಕರು ಕೂಡ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಕೆಗೆ ನಿಷೇಧಿಸಲಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲಾ ಡಿಸಿ ಕಚೇರಿಗಳಲ್ಲಿ ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಈ ಬಾರಿ ರಾಜ್ಯಾದ್ಯಂತ, 6,80,498 ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ 5,61,530 ಹೊಸಬರು, 90,902 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 1,060 ಪಿಯುಸಿ ಪರೀಕ್ಷಾ ಕೇಂದ್ರಗಳಿದ್ದು, ಅದರಲ್ಲಿ 160 ಬೆಂಗಳೂರು ನಗರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪಿಯುಸಿ ಪರೀಕ್ಷೆಯಲ್ಲಿ ಈ ಹಿಂದೆ ಆದ ಕಹಿ ಘಟನೆಗಳನ್ನ ಗಮನದಲ್ಲಿಟ್ಟುಕೊಂಡಿರುವ ಇಲಾಖೆಯು, ಅಕ್ರಮ ಮಾಡುವ ನಿಸ್ಸೀಮರ ವಿರುದ್ಧ ನಿಗಾವಹಿಸಿದೆ. ಟ್ಯೂಷನ್ ಸೆಂಟರ್, ಝೆರಾಕ್ಸ್ ಶಾಪ್, ಸೈಬರ್ ಸೆಂಟರ್ ಮೇಲೆ ಹೆಚ್ಚು ಗಮನ ಇಡಲಾಗುತ್ತಿದೆ. ಲೀಕ್ ವಿಚಾರವಾಗಿ ವದಂತಿ ಹರಡುವವರ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಪ್ರಶ್ನೆ ಪತ್ರಿಕೆಗಳನ್ನು ಟ್ರೆಷರಿಗಳಲ್ಲಿ ಇಡಲಾಗುತ್ತಿದ್ದು, ಟ್ರೆಷರಿಗಳಲ್ಲಿ ಹೆಚ್ಚಿನ ಭದ್ರತೆ ನೀಡುವ ಬಗ್ಗೆಯು ಇಲಾಖೆ ಮುನ್ನೆಚ್ಚರಿಕಾ ಕ್ರಮವಹಿಸಿದೆ. ಇದೇ 14 ರಂದು ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ತಿಳಿಸಲು ವಿಡಿಯೋ ಕಾನ್ಫರೆನ್ಸ್ ಮಾಡಲಾಗುತ್ತಿದೆ ಎಂದರು.