ಬೆಂಗಳೂರು :ಕೋವಿಡ್-19 ತಡೆಗೆ ಜಾರಿಯಾದ ಲಾಕ್ಡೌನ್ನಿಂದಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆ. ಸರ್ಕಾರದ ಕಡೆಯಿಂದ ಇಲಾಖೆಯ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಆದ್ದರಿಂದ ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ ಕಾಲೇಜುಗಳು ಬಳಲುವಂತಾಗಿದೆ.
ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಒದಗಿಸಲು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಇಲಾಖೆಯು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಮತ್ತು ಹಾಲಿ ಇರುವ ವೈದ್ಯಕೀಯ ಕಾಲೇಜುಗಳಲ್ಲಿನ ಪ್ರವೇಶಮಿತಿ ಹೆಚ್ಚಿಸಲು ಇಲಾಖೆಯು ಕ್ರಮವಹಿಸಿದೆ. ಆದರೆ, ಕಳೆದ ಮಾರ್ಚ್ ತಿಂಗಳಿಂದ ಯಾವುದೇ ಪರಿಣಾಮಕಾರಿ ಚಟುವಟಿಕೆ ನಡೆಸಲು ಸಾಧ್ಯವಾಗಿಲ್ಲ. ಕೊರೊನಾಗೆ ಬಲಿಯಾದ ಹಲವು ಪ್ರಗತಿದಾಯಕ ಕಾರ್ಯಗಳು ನಿಂತಿವೆ. ಅದರಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಚಟುವಟಿಕೆ ಕೂಡ ಹೊರತಾಗಿಲ್ಲ. ಕೇವಲ ಕೋವಿಡ್ ನಿಯಂತ್ರಣಕ್ಕೆ ಸಾಹಸ ಪಡುವುದನ್ನು ಬಿಟ್ಟರೆ ಶಿಕ್ಷಣ ಪ್ರಗತಿ, ಉನ್ನತೀಕರಣ ಹಾಗೂ ಆಸ್ಪತ್ರೆಗಳ ಗುಣಮಟ್ಟ ವೃದ್ಧಿಗೆ ಯಾವುದೇ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ.
2013-14ನೇ ಸಾಲಿಗಿಂತ ಮೊದಲು ವೈದ್ಯಕೀಯ ಶಿಕ್ಷಣದಲ್ಲಿ ಕ್ರಮವಾಗಿ 1350 ಸ್ನಾತಕ ವೈದ್ಯಕೀಯ ಮತ್ತು 430 ಸ್ನಾತಕೋತ್ತರ ವೈದ್ಯಕೀಯ ಸೀಟು ಲಭ್ಯವಿದ್ದವು. ನಂತರದ 5 ವರ್ಷಗಳಲ್ಲಿ ಹೊಸದಾಗಿ 1400 ಸ್ನಾತಕ ವೈದ್ಯಕೀಯ ಸೀಟುಗಳು ಹಾಗೂ 213 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಸೇರ್ಪಡೆಯಾದವು. 2020-21ರ ಬಜೆಟ್ ಘೋಷಣೆಯಾಗಿದ್ದನ್ನು ಹೊರತುಪಡಿಸಿದ್ರೆ ಬೇರೆ ಯಾವ ಕೆಲಸವೂ ಆಗಿಲ್ಲ.
ಬಿಎಸ್ವೈ ಸರ್ಕಾರ ಬಂದ ಮೇಲೆ ಬೆರಳೆಣಿಕೆಯಷ್ಟೇ ಅಭಿವೃದ್ಧಿ?:ಸಿಎಂ ಯಡಿಯೂರಪ್ಪ ಸಿಎಂ ಆದ ಮೇಲೆ ಬೆರಳೆಣಿಕೆಯಷ್ಟು ಅಭಿವೃದ್ಧಿ ಕೆಲಸಗಳಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣದ ಯೋಜನೆ. ಸರ್ಕಾರಿ ಕೋಟಾದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಅಲ್ಪಸಂಖ್ಯಾತರಿಗೆ ಸ್ನಾತಕ ಪದವಿ ಸೀಟುಗಳನ್ನು ಶೇ. 40 ರಿಂದ 42ಕ್ಕೆ ಹಾಗೂ ಅಲ್ಪ ಸಂಖ್ಯಾತರ ಕಾಲೇಜುಗಳಲ್ಲಿ ಶೇ. 25 ರಿಂದ 27ಕ್ಕೆ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಸೀಟುಗಳನ್ನು 298 ರಿಂದ 505ಕ್ಕೆ ಹಾಗೂ ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 11 ರಿಂದ 31ಕ್ಕೆ ಹೆಚ್ಚಳ ಮಾಡಲಾಗಿದೆ.