ಪ್ರಕರಣ ಕುರಿತು ಮಾಹಿತಿ ನೀಡಿದ ಡಿಸಿಪಿ ಶೇಖರ್ ಹೆಚ್.ಟಿ. ಬೆಂಗಳೂರು:ವೈದ್ಯಕೀಯ ಶಿಕ್ಷಣದ ಸೀಟು ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಸೆರೆ ಹಿಡಿದಿದ್ದಾರೆ. ಮೈಸೂರು ಮೂಲದ ವ್ಯಕ್ತಿಯೊಬ್ಬರಿಗೆ ಸೀಟು ಕೊಡಿಸುವುದಾಗಿ ಮೋಸ ಮಾಡಿದ್ದ ಆರೋಪದಡಿ ನಿಖಿಲ್, ಅಶುತೋಷ್, ಬಸಂತ್ ಕುಮಾರ್ ಹಾಗೂ ಆಶಿಶ್ ಆನಂದ್ ಎಂಬವರನ್ನು ಬಂಧಿಸಲಾಗಿದ್ದು, 10 ಲಕ್ಷ 80 ಸಾವಿರ ರೂ ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ವಿವರ: ಮೈಸೂರಿನ ವಿದ್ಯಾರ್ಥಿಯೊಬ್ಬರು ಮೆಡಿಕಲ್ ಸೀಟ್ಗಾಗಿ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಸಿಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆಗೆ ತಯಾರಿ ನಡೆಸಿದ್ದರು. ಅದೇ ಸಂದರ್ಭದಲ್ಲಿ ಆತನ ಅಣ್ಣನ ಮೊಬೈಲ್ಗೆ ಸಂದೇಶ ಕಳುಹಿಸಿದ್ದ ಆರೋಪಿಗಳು, ಕೆಲ ಹೊತ್ತಿನಲ್ಲೇ ದೂರವಾಣಿ ಕರೆ ಮಾಡಿ, "ನಾವು ನಾಲ್ಕೈದು ವರ್ಷಗಳಿಂದ ಮೆಡಿಕಲ್ ಸೀಟ್ ಕೊಡಿಸುತ್ತಿದ್ದೇವೆ. ನಿಮ್ಮ ಹುಡುಗನಿಗೆ ದಾವಣಗೆರೆಯ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಕೊಡಿಸುತ್ತೇವೆ" ಎಂದು ಬೆಂಗಳೂರಿಗೆ ಕರೆಸಿಕೊಂಡಿದ್ದರು.
ನಗರದ ಕನ್ನಿಂಗ್ ಹ್ಯಾಂ ರಸ್ತೆಯ ಕಚೇರಿಯೊಂದಕ್ಕೆ ಕರೆಸಿಕೊಂಡು, ಖಾಸಗಿ ಕಾಲೇಜಿನ ಕಾರ್ಯದರ್ಶಿ ಎಂದು ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಸಿ, ಸರ್ಕಾರಿ ಕೋಟಾದಲ್ಲೇ ಸೀಟ್ ಕೊಡಿಸುವುದಾಗಿ ಮೂರು ಲಕ್ಷ ರೂಪಾಯಿ ಮುಂಗಡ ಹಣ ಕೇಳಿದ್ದರು. ನಂತರ ಬಾಸ್ ಎಂದು ಮತ್ತೊಬ್ಬ ವ್ಯಕ್ತಿಯ ಪರಿಚಯ ಮಾಡಿಸಿ, ಅವರಿಗೆ ಹತ್ತು ಲಕ್ಷ ರೂ ನೀಡಿದರೆ ಸೀಟ್ ಖಚಿತವೆಂದು 10.80 ಲಕ್ಷ ವಸೂಲಿ ಮಾಡಿದ್ದರು. ಹಣ ಪಡೆದ ಬಳಿಕ ಫೋನ್ ಸಂಪರ್ಕಕ್ಕೂ ಸಿಗದೆ, ಕಚೇರಿಯಲ್ಲೂ ಕಾಣಿಸಿಕೊಳ್ಳದೆ ಪರಾರಿಯಾಗಿದ್ದರು. ಮೋಸಹೋದ ವಿದ್ಯಾರ್ಥಿಯ ಪೋಷಕರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ಸ್ ಠಾಣಾ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: "ಆರೋಪಿಗಳು ಕಚೇರಿಯಲ್ಲಿ ಹತ್ತಕ್ಕೂ ಅಧಿಕ ಸಿಬ್ಬಂದಿ ಹೊಂದಿದ್ದು, ಅವರ ಮೂಲಕ ವೈದ್ಯಕೀಯ ಸೀಟು ಅಪೇಕ್ಷಿಸುತ್ತಿರುವವರನ್ನು ಸಂಪರ್ಕಿಸಿ ವಂಚಿಸುತ್ತಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳ ಕಚೇರಿಯಲ್ಲಿ ನಕಲಿ ಹೆಸರಿನ ಬ್ಯಾಂಕ್ ಖಾತೆಗಳ ಚೆಕ್ಗಳು, ಕಂಪ್ಯೂಟರ್, ಮೊಬೈಲ್, ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ನಾಲ್ವರು ಆರೋಪಿಗಳು ನಾಪತ್ತೆಯಾಗಿದ್ದು ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಗಳ ಬ್ಯಾಂಕ್ ಖಾತೆ ಜಪ್ತಿಗೆ ಮನವಿ ಸಲ್ಲಿಸಲಾಗಿದೆ" ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್.ಟಿ.ತಿಳಿಸಿದ್ದಾರೆ.
ಇದನ್ನೂ ಓದಿ:ದೊಡ್ಡಬಳ್ಳಾಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: 57 ಪ್ರಕರಣದ 30 ಆರೋಪಿಗಳ ಬಂಧನ.. ಅಪಾರ ಮೌಲ್ಯದ ವಸ್ತು ಜಪ್ತಿ