ಬೆಂಗಳೂರು: ವೈದ್ಯಕೀಯ ಶಿಕ್ಷಣದ ಸೀಟು ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ಮೂಲದ ಶರತ್ ಗೌಡ ಬಂಧಿತ ಆರೋಪಿ.
ಹೇಗಿತ್ತು ಈತನ ಮೋಸದ ಹಾದಿ..ಸಂಜಯ ನಗರ ವ್ಯಾಪ್ತಿಯ ನ್ಯೂ ಬಿಇಎಲ್ ರಸ್ತೆಯಲ್ಲಿ ನೆಕ್ಸಸ್ ಎಡು ಎಂಬ ಹೆಸರಿನ ಕಚೇರಿ ತೆರೆದಿದ್ದ ಆರೋಪಿ, ಸಿಇಟಿಯಲ್ಲಿ ರ್ಯಾಂಕಿಂಗ್ ಕಡಿಮೆ ಬಂದ ವಿದ್ಯಾರ್ಥಿಗಳ ಪೋಷಕರು, ವೈದ್ಯಕೀಯ ಶಿಕ್ಷಣ ಪಡೆಯಲು ಪ್ರಯತ್ನಿಸುತ್ತಿರುವವರ ಮಾಹಿತಿಯನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುತ್ತಿದ್ದ. ನಂತರ ಅವರುಗಳನ್ನ ಸಂಪರ್ಕಿಸಿ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ ಇರುವ ಅಥವಾ ಡ್ರಾಪ್ ಔಟ್ ಆಗಿರುವ ಸೀಟುಗಳನ್ನು ಕಡಿಮೆ ಖರ್ಚಿನಲ್ಲಿ ತಾನು ಕೊಡಿಸುವುದಾಗಿ ನಂಬಿಸುತ್ತಿದ್ದ.
ಇದೇ ರೀತಿ ತಿಮ್ಮೇಗೌಡ ಎಂಬುವರ ಮಗನಿಗೆ ಕೇರಳದ ವೈದ್ಯಕೀಯ ಕಾಲೇಜೊಂದರಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, 12 ಲಕ್ಷ ಶುಲ್ಕ ಹೇಳಿ ನಂತರ ಹಂತಹಂತವಾಗಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಸೀಟು ಕೊಡಿಸದಿದ್ದಾಗ ಆರೋಪಿಯ ಕಚೇರಿಗೆ ಬಂದು ಪರಿಶೀಲಿಸಿದಾಗ ಬೀಗ ಹಾಕಿರುವುದು, ಮತ್ತು 8-10 ಜನ ವಂಚನೆಗೊಳಗಾಗಿರುವುದು ತಿಳಿದು ಬಂದಿತ್ತು.
ನಂತರ ಸಂಜಯನಗರ ಪೊಲೀಸ್ ಠಾಣೆಯಲ್ಲಿ ತಿಮ್ಮೇಗೌಡ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡು ಹೈದರಾಬಾದ್ ನಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ವಂಚಿಸಿದ್ದ 62 ಲಕ್ಷ ರೂ. ಪೈಕಿ 47.80 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.