ಬೆಂಗಳೂರು: ಆರೋಗ್ಯ ರಕ್ಷಣೆಯಂತಹ ಜವಾಬ್ದಾರಿ ಹೊತ್ತಿರುವ ವೈದ್ಯಕೀಯ ವೃತ್ತಿಯಲ್ಲಿರುವವರು ನಂಬಿಕೆ, ವೃತ್ತಿಪರ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬಿಎಸ್ಸಿ ಪದವಿ, ಪರ್ಯಾಯ ವೈದ್ಯಕೀಯ ಡಿಪ್ಲೊಮಾ ಹಾಗೂ ಕೋಲ್ಕತ್ತಾದ ಭಾರತೀಯ ಪರ್ಯಾಯ ವೈದ್ಯಕೀಯ ಮಂಡಳಿಯಿಂದ ಎಂಡಿ ಪದವಿ ಪಡೆದಿದ್ದ ಉಡುಪಿಯ ಮೋಹನ್ ಭಟ್ಟ ಎಂಬುವವರು ಕ್ಲಿನಿಕ್ ನೋಂದಣಿಗೆ ಜಿಲ್ಲಾಧಿಕಾರಿ ಅನುಮತಿ ನೀಡದ ಕ್ರಮ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಮೇಲ್ಮನವಿ ಅರ್ಜಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ವೈದ್ಯಕೀಯ ವೃತ್ತಿಯನ್ನು ಕೈಗೊಳ್ಳುವವರು ಉತ್ತಮ ನಡತೆ, ಗುಣ ಮತ್ತು ಬದ್ಧತೆಗೆ ಆದರ್ಶ ಉದಾಹರಣೆಯಾಗಿರಬೇಕು ಎಂದು ಪೀಠ ಸಲಹೆ ನೀಡಿ ಆದೇಶಿಸಿದೆ. ಜತೆಗೆ, ಕೆಪಿಎಂಇ ಕಾಯಿದೆ ಸೆಕ್ಷನ್ 5(9)(ಬಿ) ಪ್ರಕಾರ ಕ್ಲಿನಿಕ್ ನೋಂದಣಿಗೆ ರಾಜ್ಯ ವೈದ್ಯಕೀಯ ಮಂಡಳಿ ನೀಡಿರುವ ಸರ್ಟಿಫಿಕೆಟ್ ಮತ್ತು ಇತರ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, ಅರ್ಜಿದಾರರು ಸಲ್ಲಿಸಿಲ್ಲ. ಈ ಎಲ್ಲ ಅಂಶಗಳನ್ನು ಏಕ ಸದಸ್ಯಪೀಠ ದಾಖಲಿಸಿದೆ. ಹಾಗಾಗಿ ಆ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.
ಅಲೋಪತಿ ವಿಭಾಗದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳುವವರಿಗೆ ಭಾರತೀಯ ವೈದ್ಯಕೀಯ ಮಂಡಳಿ ಪ್ರಮಾಣಪತ್ರ ನೀಡುತ್ತದೆ. ಅಂತೆಯೇ ಪ್ರತಿಯೊಂದು ವೈದ್ಯಕೀಯ ವಿಭಾಗಕ್ಕೂ ಒಂದೊಂದು ನಿಯಂತ್ರಣ ಸಂಸ್ಥೆಗಳಿದ್ದು, ಅವುಗಳ ಪ್ರಮಾಣ ಪತ್ರವನ್ನು ಪಡೆಯಲೇಬೇಕಾಗುತ್ತದೆ. ಜತೆಗೆ, ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರು ಜನರ ವಿಶ್ವಾಸ ಉಳಿಸಿಕೊಳ್ಳಬೇಕಾದರೆ ಅವರ ನಡವಳಿಕೆ ಕೂಡ ಮುಖ್ಯವಾಗಿರುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.