ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಕೊರೊನಾ ಇನ್ನೂ ಹೆಚ್ಚಾಗಲಿದೆ, ಆದರೂ ಭಯಬೇಡ: ಸಚಿವ ಡಾ. ಕೆ. ಸುಧಾಕರ್ - Medical Education Minister Sudhakar statement

ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಸ್ವಲ್ಪ ಪರಿಸ್ಥಿತಿ ಅಸ್ತವ್ಯಸ್ತ ಆಗಿತ್ತು. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗ್ತಾ ಇರಲಿಲ್ಲ. ಹೀಗಾಗಿ ನಾಳೆಯಿಂದ 400 ಆ್ಯಂಬುಲೆನ್ಸ್ ಲಭ್ಯವಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನಗರದ ಜನತೆಗೆ ಅಭಯ ನೀಡಿದ್ದಾರೆ.

Medical Education Minister Sudhakar statement
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

By

Published : Jul 5, 2020, 7:57 PM IST

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದು ಮುಂದುವರಿಯಲಿದೆ. ಆದರೆ ಅದಕ್ಕೆ ಯಾರು ಹೆದರುವುದು ಬೇಡವೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಮೂರು ತಿಂಗಳು ಲಾಕ್​ಡೌನ್ ಮಾಡಲಾಗಿತ್ತು. ಬೇರೆ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿತ್ತು. ಈಗ ಲಾಕ್​​ಡೌನ್ ಬಳಿಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸಾವಿನ ಪ್ರಮಾಣ ನೋಡಿ ಜನ ಭಯ ಪಡಬೇಡಿ. ಅಗತ್ಯ ಇದ್ದರೆ ವೈದ್ಯರು ಸ್ವ್ಯಾಬ್ ಟೆಸ್ಟ್ ಮಾಡ್ತಾರೆ ಎಂದರು.

ಈ ಕೊರೊನಾಗೆ ಹೆದರಬೇಡಿ. ಇದಕ್ಕಿಂತ ಕ್ಷಯ ರೋಗಕ್ಕೆ ಜನರು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸಾಯ್ತಾರೆ. ಕೋವಿಡ್​​ನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಿ ಭೀತಿ ಸೃಷ್ಟಿಸೋದು ಬೇಡವೆಂದು ಸಚಿವರು ಮನವಿ ಮಾಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

ಯಾರಿಗೆ ಕೋವಿಡ್ - 19 ಪಾಸಿಟಿವ್ ಬಂದಿರುತ್ತದೆಯೋ ಅವರ ಮನೆಗಳಿಗೆ ಆ್ಯಂಬುಲೆನ್ಸ್ ಬರಲಿದೆ. ಜ್ವರ ಬಂದರೆ ಹೆದರೋದು ಬೇಡ. ಹತ್ತಿರದ ಫೀವರ್ ಕ್ಲಿನಿಕ್​​ಗೆ ಹೋಗಿ. ಕೋವಿಡ್ ಹೊರತುಪಡಿಸಿ ಸಾಮಾನ್ಯ ರೋಗಕ್ಕೆ 108 ನಂಬರ್​ಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಸಿಗಲಿದೆ. ಇದರ ಜೊತೆಗೆ 400 ಆ್ಯಂಬುಲೆನ್ಸ್ ಕೋವಿಡ್​ಗಾಗಿ ಮಾತ್ರ ಮೀಸಲಿಡಲಾಗಿದೆ. ಯಾರು ಹೆದರಬೇಕಿಲ್ಲ. ಉತ್ತಮ ಚಿಕಿತ್ಸೆ ನೀಡುವ ಜವಬ್ದಾರಿ ನಮ್ಮದು ಎಂದು ಅಭಯ ನೀಡಿದರು.

ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಸ್ವಲ್ಪ ಪರಿಸ್ಥಿತಿ ಅಸ್ತವ್ಯಸ್ತ ಆಗಿತ್ತು. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗ್ತಾ ಇರಲಿಲ್ಲ. ಹೀಗಾಗಿ ನಾಳೆಯಿಂದ 400 ಆ್ಯಂಬುಲೆನ್ಸ್​ಗಳು ಲಭ್ಯವಾಗಲಿವೆ. ಪ್ರತಿ ವಾರ್ಡ್​​ಗೆ 2 ಆ್ಯಂಬುಲೆನ್ಸ್ ಮೀಸಲಿಡಲಾಗಿದೆ ಎಂದು ವಿವರಿಸಿದರು.

ಇಲ್ಲಿ ತನಕ 6.5 ಲಕ್ಷ ಜನರನ್ನು ಟೆಸ್ಟ್ ಮಾಡಿದ್ದೇವೆ. ಯಾರೊಬ್ಬರಿಂದಲೂ ಸರ್ಕಾರ ಹಣ ತಗೊಂಡಿಲ್ಲ. ಯಾರೋ ಖಾಸಗಿ ಕೋವಿಡ್ ಕೇರ್ ಸೆಂಟರ್ ಗೆ ಹೋಗಿ ಚೆಕ್ ಮಾಡಿಸಿಕೊಂಡು ಹಣ ನೀಡಿರಬಹುದು. ಆದ್ರೆ ಸರ್ಕಾರ ಕೋವಿಡ್ ಟೆಸ್ಟ್ ಗೆ ಒಂದೇ ಒಂದು ರೂಪಾಯಿ ಸಹ ತಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

1912 ಸಹಾಯವಾಣಿ

ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಅಥವಾ ಕೋವಿಡ್ ಕೇರ್ ಸೆಂಟರ್​​ನಲ್ಲಿ ರೋಗಿಗಳಿಗೆ ಏನೇ ಸಮಸ್ಯೆಯಾದರೂ, 1912 ನಂಬರಿಗೆ ಕರೆ ಮಾಡಿದರೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಇದೊಂದು 24 ಗಂಟೆ ಕೆಲಸ ಮಾಡುವ ಕಾಲ್ ಸೆಂಟರ್ ಆಗಿದೆ. ಬೆಸ್ಕಾಂ ಎಂಡಿ ಇದರ ಉಸ್ತುವಾರಿ ವಹಿಸಿದ್ದು, ಏನೇ ಸಮಸ್ಯೆ ಇದ್ದರೂ ಈ ಸಂಖ್ಯೆಗೆ ಕರೆ ಮಾಡಿದರೆ, ತಕ್ಷಣ ಸಮಸ್ಯೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕ್ರಿಮಿನಲ್ ಕೇಸ್ ದಾಖಲು:

ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಯನ್ನು ದಾಖಲಿಸಲು ನಿರಾಕರಿಸುವಂತಿಲ್ಲ ಎಂದು ಸಚಿವ ಕೆ. ಸುಧಾಕರ್ ಸ್ಪಷ್ಟಪಡಿಸಿದರು. ಈ ಬಗ್ಗೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಯವರು ಕೋವಿಡ್ ರೋಗಿಯನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ರೆ, ಅಂತಹ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಖಾಸಗಿ ಆಸ್ಪತ್ರೆ ಕೊಟ್ಟ ಬೆಡ್ 116

ಖಾಸಗಿ ಆಸ್ಪತ್ರೆಯವರು ಒಟ್ಟು 2,734 ಬೆಡ್​​ಗಳನ್ನು ಕೊಡಬೇಕಾಗಿದೆ. ಅದರಲ್ಲಿ ಈವರೆಗೆ 116 ಬೆಡ್​ಗಳನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಯವರು ತಮ್ಮಲ್ಲಿನ 50% ಬೆಡ್ ಕೊಡಬೇಕು. ಈ ಬಗ್ಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 819 ಹಾಸಿಗೆ ಇದ್ದು, ಇದರಲ್ಲಿ 667 ರೋಗಿಗಳಿದ್ದಾರೆ. 152 ಬೆಡ್ ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 611 ಬೆಡ್​​​ಗಳಿದ್ದು, ಸುಮಾರು 105 ಬೆಡ್ ಖಾಲಿಯಿವೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳಲ್ಲಿ 11,120 ಹಾಸಿಗೆ ಭರ್ತಿಯಾಗಿದ್ದು, 789 ಹಾಸಿಗೆ ಖಾಲಿ ಇವೆ ಎಂದು ಅವರು ವಿವರಿಸಿದರು.

ಖಾಸಗಿ ಆಸ್ಪತ್ರೆ ಬೆಡ್ ತೆಗೆದುಕೊಳ್ಳುವ ವಿಚಾರದಲ್ಲಿ ಸಚಿವ ಆರ್. ಅಶೋಕ್ ಮತ್ತು ಎಸ್.ಆರ್. ವಿಶ್ವನಾಥ್ ನೋಡಿಕೊಳ್ತಾರೆ ಎಂದರು.

ಹೆಚ್ಚು ಪರೀಕ್ಷೆ ಮಾಡೋಕೆ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ 80 ಲ್ಯಾಬ್ ಮಾಡಿದ್ದೇವೆ. ಖಾಸಗಿ ವಲಯದವರು ಟೆಸ್ಟಿಂಗ್ ಲೋಡ್ ತಗೊಂಡಿಲ್ಲ. ಹೀಗಾಗಿ ಅದಕ್ಕೆ ನಿಯಮ ರೂಪಿಸಿದ್ದೇವೆ. ಇನ್ಮುಂದೆ ಖಾಸಗಿ ಲ್ಯಾಬ್​ನಲ್ಲಿ ನಾವು ಕಳಿಸುವ ಸ್ಯಾಂಪಲ್ ಟೆಸ್ಟ್ ಮಾಡಬೇಕು ಎಂದು ತಿಳಿಸಿದರು.

60 ವರ್ಷ ಮೀರಿದವರು ಹೊರಗೆ ಬರುವಂತಿಲ್ಲ

ಇನ್ನು ಮುಂದೆ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರುವುದನ್ನು ನಿಯಂತ್ರಿಸಲು ಕಾನೂನು ತರಲಿದ್ದೇವೆ. ಈ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಲಾಗಿದೆ. ಲಾಕ್‌ಡೌನ್ ಬದಲು 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರುವುದನ್ನು ತಡೆಯಬೇಕಾಗಿದೆ. ವಾಕಿಂಗ್​​ಗೆ ಹೋಗುವುದನ್ನು ನಿರ್ಬಂಧಿಸಬೇಕಾಗಿದೆ. ಈ ಸಂಬಂಧ ಶೀಘ್ರ ಕಾನೂನು ಹೊರಡಿಸಲಿದ್ದೇವೆ ಎಂದು ಸಚಿವ ಸುಧಾಕರ್​ ಮಾಹಿತಿ ನೀಡಿದರು.

ABOUT THE AUTHOR

...view details