ಬೆಂಗಳೂರು:ಮಾಧ್ಯಮಗಳು ಸರ್ಕಾರಗಳ ತಪ್ಪುಗಳನ್ನು ತೋರಿಸಲು ಹಿಂಜರಿದಲ್ಲಿ ನಿರಂಕುಶಾಧಿಕಾರಕ್ಕೆ ಕಾರಣವಾಗಲಿದ್ದು, ಸಮಾಜದ ಪ್ರಗತಿಗೆ ಹಾನಿಯಾಗಲಿದೆ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಪತ್ರಕರ್ತೆಯರ ಸಂಘ ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತೆ ನಾಗಮಣಿ ಎಸ್.ರಾವ್ ಸ್ಥಾಪಿಸಿರುವ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಸರ್ಕಾರ ಮತ್ತು ಸಮಾಜದ ತಪ್ಪುಗಳನ್ನು ಪ್ರತಿಬಿಂಬಿಸಲು ಧೈರ್ಯಶಾಲಿಯಾದಲ್ಲಿ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ಅಲ್ಲದೆ, ಮಾಧ್ಯಮಗಳ ಒಲವು ಸದಾ ದೇಶದ ಪ್ರಜೆಗಳ ಕುರಿತಾಗಿರಬೇಕು. ಅದಕ್ಕೆ ಬದಲಾಗಿ ತಾತ್ಕಾಲಿಕವಾಗಿ ಅಧಿಕಾರದಲ್ಲಿರುವವರ ಕುರಿತಲ್ಲ. ಈ ಕರ್ತವ್ಯ ಪ್ರಜ್ಞೆ ಅಳವಡಿಸಿಕೊಂಡಲ್ಲಿ ಮಾತ್ರ ಜನ ಸಾಮಾನ್ಯರ ಮನ್ನಣೆಗೆ ಪಾತ್ರವಾಗಲಿವೆ. ಮಾಧ್ಯಮಗಳು ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಪ್ರಚಾರ ಮಾಡದೆ, ಸಮಾಜದಲ್ಲಿರುವ ಕುಂದುಕೊರತೆಗಳತ್ತ ಗಮನ ಹರಿಸಬೇಕು. ಅಲ್ಲದೆ, ದಿಟ್ಟತನದಿಂದ ಸತ್ಯ ಪರಿಸ್ಥಿತಿಯನ್ನು ತೋರಿಸುವಂತಾಗಬೇಕು ಎಂದು ಅವರು ವಿವರಿಸಿದರು.
ಮಾಧ್ಯಮಗಳು ಸಂವೇದನಾಶೀಲರಾಗಿರಬೇಕು:ರಾಷ್ಟ್ರದ ಸಂರಕ್ಷಣೆ ಹಾಗು ಇತರೆ ರಾಷ್ಟ್ರಗಳೊಡನೆ ಹೊಂದಿರುವ ಸ್ನೇಹ ಸಂಬಂಧಗಳ ವಿಚಾರದಲ್ಲಿ ಮಾಧ್ಯಮಗಳು ಅತ್ಯಂತ ಸಂವೇದನಾಶೀಲರಾಗಿ ಕಾರ್ಯನಿರ್ವಹಿಸಬೇಕು. ಅತ್ಯುತ್ಸಾಹದಿಂದ ಅಂತಹ ವಿಚಾರಗಳನ್ನು ವಿಶ್ಲೇಷಣೆ ಮಾಡುವುದರಿಂದ ರಾಷ್ಟ್ರದ ಹಿತಕ್ಕೆ ಧಕ್ಕೆಯಾಗುವ ಸಂದರ್ಭಗಳು ಎದುರಾಗಲಿವೆ. ಪ್ರತಿಯೊಬ್ಬ ಪತ್ರಕರ್ತನು ತನಗಿರುವ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಯಾವುದೇ ಸುದ್ದಿ ಪ್ರಕಟ ಮಾಡುವ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಭೀರಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.