ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ಕೆಲಸ ಮಾಡುವ ಕಸ ಗುಡಿಸುವ ಯಂತ್ರದ (ಮೆಕ್ಯಾನಿಕಲ್ ಸ್ವೀಪರ್ ಮೆಷಿನ್) ಕಾರ್ಯವೈಖರಿಯನ್ನು ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಅಧಿಕಾರಿಗಳು ರಾತ್ರಿ ಹನ್ನೊಂದರಿಂದ ಮಧ್ಯರಾತ್ರಿ 1 ಗಂಟೆವರೆಗೂ ಪರಿಶೀಲಿಸಿದರು.
ಕೆಂಪೇಗೌಡ ರಸ್ತೆಯ ಇಂದಿರಾ ಕ್ಯಾಂಟೀನ್ (ಬನ್ನಪ್ಪ ಉದ್ಯಾನ) ಬಳಿ ರಸ್ತೆಯ ಇಕ್ಕೆಲಗಳಲ್ಲಿ ಕಸಗುಡಿಸುವ ಯಂತ್ರದ ಮೂಲಕ ಸ್ವಚ್ಛ ಮಾಡುತ್ತಿರುವುದನ್ನು ಪರಿಶೀಲನೆ ನಡೆಸಿ, ರಸ್ತೆ ಇಕ್ಕೆಲಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ರಸ್ತೆಗಳು ಸುಂದರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಪರಿಶೀಲನೆ ನಂತರ ಸೆಂಟ್ರಲ್ ಕಾಲೇಜು ವೃತ್ತದಿಂದ ಅರಮನೆ ರಸ್ತೆ ಮಾರ್ಗದಲ್ಲಿ ನಡೆಯುತ್ತಿರುವ ಟೆಂಡರ್‌ಶ್ಯೂರ್ ಕಾಮಗಾರಿಯನ್ನು ತಪಾಸಣೆ ನಡೆಸಿ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಸೂಚಿಸಿದರು.
ಶಿವಾನಂದ ವೃತ್ತದಿಂದ ಕೃಷ್ಣಾ ವಸತಿಗೃಹ ರಸ್ತೆಮಾರ್ಗದಲ್ಲಿ ಸ್ವಚ್ಛಗೊಳಿಸುತ್ತಿದ್ದ ಯಂತ್ರವನ್ನು ತಪಾಸಣೆ ನಡೆಸಿದರು. ಈ ವೇಳೆ ಜಿಪಿಎಸ್ ಮೂಲಕ ಎಲ್ಲೆಲ್ಲಿ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಅದನ್ನು ನೋಡುವ ವ್ಯವಸ್ಥೆ ಕಲ್ಪಿಸಿ ನಿಗಾವಹಿಸಬೇಕು ಎಂದರು.
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಪರಿಶೀಲನೆ ಬಳಿಕ, ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದ ಬಳಿ, ಅಸಾಯಿ ರಸ್ತೆ ಬದಿ, ಬಾಣಸವಾಡಿ ಮುಖ್ಯ ರಸ್ತೆ ಹಾಗೂ ಮೇಲ್ಸೇತುವೆಯನ್ನು ತಪಾಸಣೆ ನಡೆಸಿ ಮೇಲ್ಸೇತುವೆ ಹಾಗೂ ಅದರ ಇಕ್ಕೆಲಗಳನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಹಾಗೂ ಬೆಳೆದಿರುವ ಹುಲ್ಲನ್ನು ಕೂಡಲೇ ತೆರವು ಮಾಡಿ ಸ್ವಚ್ಛಗೊಳಿಸಬೇಕು ಎಂದು ಸೂಚನೆ ನೀಡಿದರು.
ಕೊನೆಗೆ ಸಿ. ಎಂ. ಹೆಚ್ ರಸ್ತೆ ತಪಾಸಣೆ ನಡೆಸಿದ ಅವರು, ಪಾದಚಾರಿ ಮಾರ್ಗದಲ್ಲಿ ಯಾವುದೇ ಡೆಬ್ರಿಸ್ ಇರದಂತೆ ನೋಡಿಕೊಳ್ಳಬೇಕು. ಇದೇ ವೇಳೆ, ಯಂತ್ರದಿಂದ ಸಂಗ್ರಹವಾಗುವ ಕಸವನ್ನು ನೇರವಾಗಿ ಲ್ಯಾಂಡ್ ಫಿಲ್ ಗಳಿಗೆ ಸಾಗಿಸಲು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.