ಬೆಂಗಳೂರು:ದೇಶ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ ಎಂಬುದನ್ನು ಇಂದಿನ ಬಜೆಟ್ ತೋರಿಸಿಕೊಟ್ಟಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಕೇಂದ್ರ ಬಜೆಟ್ಅನ್ನು ಟೀಕಿಸಿದ್ದಾರೆ.
ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಹಣಕಾಸು ಮಂತ್ರಿ, ಪ್ರಧಾನಿ ಆಗಿದ್ದಾಗ ರೂಪಿಸಿದ್ದು ಭಾರತದ ಬಲಿಷ್ಠ ಆರ್ಥಿಕ ವ್ಯವಸ್ಥೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ 6 ವರ್ಷಗಳ ಅಧಿಕಾರದಲ್ಲಿ ದೇಶದ ಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ ಎಂದು ಎಂ.ಬಿ. ಪಾಟೀಲ್ ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಭಾರತೀಯ ಜೀವವಿಮಾ ನಿಗಮ ನಮ್ಮ ದೇಶದ ಅತ್ಯಂತ ಸದೃಢ ಸಂಸ್ಥೆಯಾಗಿತ್ತು. ಅನೇಕ ರಾಜ್ಯಗಳಿಗೆ, ದೇಶದ ಪ್ರಮುಖ ಯೋಜನೆಗಳಿಗೆ ಸಾಲ ನೀಡಿದ್ದಂತಹ ಬಲಿಷ್ಠ ಸಂಸ್ಥೆಯ ಶೇರುಗಳನ್ನು ಇಂದು ಮಾರಾಟ ಮಾಡಲು ಹೊರಟಿರುವುದು ದೇಶದ ಆರ್ಥಿಕ ದುಸ್ಥಿತಿಯ ಪ್ರತೀಕವಾಗಿದೆ ಎಂದಿದ್ದಾರೆ.
ಯುರೋಪ್, ಅಮೆರಿಕ ಸೇರಿದಂತೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಆರ್ಥಿಕ ಹಿಂಜರಿಕೆ ಅನುಭವಿಸಿದ್ದರೂ ಮನಮೋಹನ್ ಸಿಂಗ್‍ರ ಕಾಲದಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಇಂದು ಜಿಡಿಪಿ ಶೇ. 3.5ಕ್ಕೆ ಕುಸಿದಿದೆ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಯುವಕರಿಗೆ ಅಚ್ಚೇ ದಿನ್ ಬರಲೇ ಇಲ್ಲ. ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅನುದಾನ ಕಡಿತ ಮಾಡಿದ್ದಾರೆ. ಇದರಿಂದ ಇಡೀ ದೇಶದಲ್ಲಿಯೇ ಗ್ರಾಮ ಪಂಚಾಯತ್ಗಳು ದುರ್ಬಲವಾಗಲಿವೆ ಎಂದಿದ್ದಾರೆ.
ನೀರಾವರಿಗೆ ಸಂಬಂಧಿಸಿದಂತೆ ಎಐಬಿಪಿ ಯೋಜನೆಯ ಕುರಿತು ಈ ಬಜೆಟ್‍ನಲ್ಲಿ ಪ್ರಸ್ತಾಪವೇ ಇಲ್ಲ. ಇದರಿಂದ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಬೇಕಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಗೆ(ಆಲಮಟ್ಟಿ) ಹಿನ್ನಡೆಯಾಗಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಇಂದಿನ ಬಜೆಟ್ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.