ಬೆಂಗಳೂರು: ರಾಜ್ಯದಲ್ಲಿ ಅನುಸರಿಸಿದ್ದ ಆಪರೇಷನ್ ಕಮಲ, ಬೆದರಿಕೆ ತಂತ್ರಗಳನ್ನು ಬಿಜೆಪಿ ಮಹಾರಾಷ್ಟ್ರ, ಹರಿಯಾಣದಲ್ಲೂ ಮಾಡಬಹುದು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಜನರು ಭಾವನಾತ್ಮಕ ವಿಚಾರಗಳಿಂದ ಹೊರ ಬರಬೇಕಾದರೆ ಕೆಲವು ದಿನಗಳು ತೆಗೆದುಕೊಳ್ಳುತ್ತದೆ. ಆರ್ಥಿಕ ವಿಚಾರಗಳು, ಉದ್ಯೋಗ, ಹೊಟ್ಟೆಪಾಡಿನ ವಿಚಾರಗಳು ಕೆಲ ತಿಂಗಳಲ್ಲೇ ಗೊತ್ತಾಗುತ್ತೆ. ಆಗ ಭಾವನಾತ್ಮಕ ವಿಚಾರಗಳು ಹೋಗುತ್ತವೆ. ಇದು ಕ್ಷಣಿಕ, ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತೆ ಎಂದರು.
ಕಾಂಗ್ರೆಸ್, ಎನ್ಸಿಪಿಯನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮಹಾರಾಷ್ಟ್ರದಲ್ಲಿ ಬಿಜೆಪಿಯವರು ನಡೆಸಿದ್ದರು. ಆರ್ಥಿಕ ಪರಿಸ್ಥಿತಿ ಕುಸಿದು ಹೋಗಿದೆ. ಜನರನ್ನು ಒಮ್ಮೆ ಮರುಳು ಮಾಡಬಹುದು. ಪುಲ್ವಾಮಾ, ಬಾಲಾಕೋಟ್ ದಾಳಿ ವರ್ಕೌಟ್ ಆಗಲ್ಲ. ಇದನ್ನು ಮುಂದಿಟ್ಟುಕೊಂಡು ಜನರನ್ನು ದಾರಿ ತಪ್ಪಿಸೋಕೆ ಆಗಲ್ಲ. ಸದ್ಯಕ್ಕೆ ಅವರಿಗೆ ಲಾಭವಾಗಬಹುದು. ಇದೆಲ್ಲವೂ ಕ್ಷಣಿಕ. ಮುಂದೆ ಉತ್ತಮ ಸನ್ನಿವೇಶ ಬರಲಿದೆ. ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶ ಸಿಗಲಿದೆ ಎಂದರು.
ಕಾಂಗ್ರೆಸ್ ನಾಯಕರನ್ನಷ್ಟೇ ಟಾರ್ಗೆಟ್ ಮಾಡಿದ್ದರು:ಡಿಕೆಶಿಗೆ ಹೈಕೋರ್ಟ್ ಜಾಮೀನು ವಿಚಾರ ಮಾತನಾಡಿ, ನಿನ್ನೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಜಾಮೀನು ಸಿಕ್ಕಿದ್ದು ತುಂಬಾ ಸಂತೋಷ. ಬಿಜೆಪಿಯವರು ದ್ವೇಷ ರಾಜಕಾರಣ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನಷ್ಟೇ ಟಾರ್ಗೆಟ್ ಮಾಡಿದ್ದರು. ಬೇರೆಯವರ ಮೇಲೆ ಯಾಕೆ ಯಾವ ದಾಳಿ ಆಗಲಿಲ್ಲ. ಬರುವ ದಿನಗಳಲ್ಲಿ ಜನ ಇದಕ್ಕೆ ಉತ್ತರ ಕೊಡ್ತಾರೆ ಎಂದರು.