ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪದಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು. ಇಂದು ಮಧ್ಯಾಹ್ನ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರುಗಳ ಸಭೆಗೆ ತೆರಳುವ ಮುನ್ನ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್‌ನಿಂದ ಲಿಂಗಾಯತರಿಗೆ ಅವಮಾನ ಆಗಿದೆ ಎಂದು ಮೋದಿ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಹಾಗೂ ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಹೇಳಿದ್ದಾರೆ. ಆದರೆ ವೀರೇಂದ್ರ ಪಾಟೀಲ್ ಆ ಸಂದರ್ಭದಲ್ಲಿ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ರು. ಹೀಗಾಗಿ ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುವುದು ಸಾಧ್ಯವಾಗ್ತಾ ಇರಲಿಲ್ಲ. ಆ ದಿಸೆಯಲ್ಲಿ ಬದಲಾವಣೆ ಮಾಡಲಾಯಿತು.
ಆದ್ರೆ ಯಡಿಯೂರಪ್ಪ ಅವರಿಗೆ ಏನ್ ಆಗಿತ್ತು? ಯಡಿಯೂರಪ್ಪನವರು ಹುಷಾರಾಗಿಯೇ ಇದ್ದಾರೆ ಅಲ್ವಾ? ಯಡಿಯೂರಪ್ಪರನ್ನು ಮೋದಿ ಯಾಕೆ ಸಿಎಂ ಸ್ಥಾನದಿಂದ ತೆಗೆದ್ರು. ಮೊದಲು ಆ ಪ್ರಶ್ನೆಗೆ ಉತ್ತರ ಕೊಡ್ಲಿ. ಯಡಿಯೂರಪ್ಪ ಅವರನ್ನು ತೆಗೆದು ಇನ್ನೊಬ್ಬ ಲಿಂಗಾಯತರನ್ನು ಸಿಎಂ ಮಾಡಿದ್ರು. ಅದು ಕೂಡಾ ಅವರ ಉದ್ದೇಶ ಇರಲಿಲ್ಲ. ಅವರ ಉದ್ದೇಶ ಬೇರೆ ಇತ್ತು. ಯಾವಾಗ ಲಿಂಗಾಯತ ಸಮುದಾಯ ಸಿಡಿದೇಳುವ ಸಂದರ್ಭ ಬಂತು, ತಿರುಗು ಬಾಣ ಆಗುತ್ತೆ ಅಂತ ಹೇಳಿ ಬೊಮ್ಮಾಯಿಯನ್ನು ಸಿಎಂ ಮಾಡಿದ್ರು. ಇದು ಜಗತ್ತಿಗೆ ಗೊತ್ತಿದೆ ಎಂದರು.
ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡಿ, ಈಗ ಅವರು ನಿವೃತ್ತಿ ಆಗ್ತೀನಿ ಅಂತ ಹೇಳಿದ್ದಾರೆ. ಈಗ ಅವರ ಮುಖಾಂತರ ಮತ ಪಡೆಯಬೇಕು ಅಂತ ಹೇಳಿ ಪ್ರಯತ್ನ ನಡೆದಿದೆ. ಆದ್ರೆ ಲಿಂಗಾಯತರಿಗೆ ಎಲ್ಲವೂ ಗೊತ್ತಿದೆ. ಬಿಎಸ್ವೈ ಮೂಲೆ ಗುಂಪು ಆಗಿದ್ದಾರೆ. ಮತ್ತೆ ಯಡಿಯೂರಪ್ಪ ಅವರನ್ನ ಸಿಎಂ ಮಾಡ್ತೀವಿ ಅಂತ ಘೋಷಣೆ ಮಾಡ್ಲಿ. ಬಿಎಸ್ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತೀವಿ, ಅಧಿಕಾರಕ್ಕೆ ಬಂದ್ರೆ ಸಿಎಂ ಮಾಡ್ತೀವಿ ಅಂತ ಮೋದಿ ಮತ್ತು ಅವರ ಪಕ್ಷದವರು ಹೇಳಲಿ. ದೀಪ ಆರುವ ಮುನ್ನಾ ಬಹಳ ಬೆಳಗುತ್ತೆ ಅಲ್ವಾ? ಹಾಗೇ ಇದು, ಕಡೆ ಪ್ರಯತ್ನ ಲಿಂಗಾಯತರ ಮನ ಸೆಳೆಯೋಕೆ ಮಾಡುವ ಯತ್ನ. ಲಿಂಗಾಯತರು, ಮಠ ಮಾನ್ಯಗಳು ತಿಳಿದುಕೊಂಡಿವೆ. ಲಿಂಗಾಯತರು ಶಿಕ್ಷಣ ಪಡೆದಿದ್ದಾರೆ. ಲಿಂಗಾಯತರು ಬುದ್ದಿವಂತರು ಇದ್ದಾರೆ, ತಿಳಿದುಕೊಂಡಿದ್ದಾರೆ. ಮೋದಿ ಅವರ ನಾಟಕ ನಮ್ಮೆಲ್ಲರಿಗೂ ಅರ್ಥ ಆಗುತ್ತೆ ಎಂದು ಹೇಳಿದರು.