ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಸಮಿತಿಯ ಸದಸ್ಯರಾಗಿ ನೇಮಕ ಮಾಡಿರುವ ವಿಚಾರ ತಿಳಿದಿದೆ. ಯಡಿಯೂರಪ್ಪ ಅವರು ಹಿರಿಯರು. ಅವರಿಗೆ 75 ವರ್ಷ ಆಗಿದೆ ಅಂತ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು. ಇವಾಗ ಮತ್ತೆ ಅವರಿಗೆ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಸ್ಥಾನ ನೀಡಿದ್ದಾರೆ. ಬಿಜೆಪಿ ನಾಯಕರಿಗೆ ಇವಾಗ ಯಡಿಯೂರಪ್ಪ ಅವರ ಮೇಲೆ ಪ್ರೀತಿ ಬಂದಿದೆಯಾ?. ನಾನು 75 ವರ್ಷಕ್ಕೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.
ಬಿಜೆಪಿಯಲ್ಲಿ ಕೆಲವು ಬೆಳವಣಿಗೆ ನಡೆದಿದೆ. ಮಾಧುಸ್ವಾಮಿ ಹೇಳಿಕೆಯಿಂದ ಬಿಜೆಪಿಗೆ ಆಘಾತ ಆಗಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಬಿಜೆಪಿಗೆ ಆಘಾತ ಆಗಿದೆ. ಹಾಗಾಗಿ, ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಯಡಿಯೂರಪ್ಪ ಅವರಿಗೆ ಈ ಹುದ್ದೆ ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಕೇಂದ್ರ ಬಿಜೆಪಿ ಸರ್ಕಾರ ಯಾಕೆ ಯುಸ್ ಆಂಡ್ ಥ್ರೋ ಮಾಡ್ತಿದೆ ಎಂದು ಹೇಳಿದರು.