ಬೆಂಗಳೂರು: ಪ್ರಧಾನಿ ಮೋದಿಯವರ ವಿಷನ್‌ನಂತೆ ನೂರು ದಿನದಲ್ಲಿ ಕಸ ನಿರ್ವಹಣೆಯಲ್ಲಿ ಹಿಡಿತ ತರಲಾಗುವುದು. ದೂರದೃಷ್ಟಿಯಿಂದ ಕಸ ನಿರ್ವಹಣೆಗೆ ಯೋಜನೆ ರೂಪಿಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ಹೇಳಿದರು.
ಇಂದು ಬೆಳ್ಳಂಬೆಳಗ್ಗೆ ಘನತ್ಯಾಜ್ಯ ಭೂಭರ್ತಿ ಪ್ರದೇಶಗಳಾದ ಮಿಟಗಾನಹಳ್ಳಿ, ಬೆಳ್ಳಳ್ಳಿ ಹಾಗೂ ಬಾಗಲೂರು ಕ್ವಾರಿಗಳಿಗೆ ಭೇಟಿ ನೀಡಿ, ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಕಸ ವಿಲೇವಾರಿ ಕುರಿತು ಪ್ರತಿದಿನ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ. ಕ್ವಾರಿಗಳ ಪರಿಸ್ಥಿತಿ ನೋಡಲಾಯಿತು. ತಕ್ಷಣ ಕ್ವಾರಿಗಳನ್ನು ಬಂದ್ ಮಾಡಿದರೆ, ಬೇರೆ ವ್ಯವಸ್ಥೆ ಇಲ್ಲದೆ ಕಷ್ಟವಾಗಬಹುದು. ಹೀಗಾಗಿ ಮುಂದಿನ ಆರು ತಿಂಗಳು ಅಥವಾ ಒಂದು ವರ್ಷ ಕ್ವಾರಿಗಳಲ್ಲೇ ಕಸ ಸುರಿಯಬೇಕಾಗಿದೆ. ನೂರು ದಿನಗಳನ್ನು ಕೊಡಿ, ಕಸದ ಸಮಸ್ಯೆ ಸರಿದಾರಿಗೆ ತರುತ್ತೇನೆ ಎಂದು ಸವಾಲೆಸೆದರು.
ಕಸ ನಿರ್ವಹಣೆ ಸರಿದಾರಿಗೆ ತರುತ್ತೇನೆ ಎಂದ ನೂತನ ಮೇಯರ್.. ಕಸ ನಿರ್ವಹಣೆಗೆ ಬಯೋಮಿಥನೈಸೇಷನ್ ಆರಂಭಿಸಲು ಚಿಂತನೆ:ಸಿಪಿಆರ್‌ಐ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೆಜ್ಮೆಂಟ್‌ಗಳಲ್ಲಿ ಈಗಾಗಲೇ ಅಲ್ಲಿ ಉತ್ಪತ್ತಿಯಾಗುವ ಹತ್ತು ಟನ್ ಕಸದಲ್ಲಿ ಸ್ವಲ್ಪವೂ ಹೊರಗೆ ಬಾರದಂತೆ ಬಯೋಮಿಥನೈಸೇಷನ್ ಅಳವಡಿಸಿದ್ದಾರೆ. ಬುಧವಾರ ಅಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗುವುದು. ಉತ್ತಮ ವ್ಯವಸ್ಥೆಯಾಗಿದ್ದರೆ, ಪ್ರತೀ ವಾರ್ಡ್‌ಗಳಲ್ಲಿ ಆರು ಲಕ್ಷ ವೆಚ್ಚದಲ್ಲಿ ಬಯೋಮಿಥನೈಸೇಷನ್ ಪ್ಲಾಂಟ್ ಆರಂಭಿಸಲಾಗುವುದು ಎಂದರು. ಇದರಿಂದ ಕಸ ಸಾಗಾಣಿಕೆಗೆ ಆಗುವ ವೆಚ್ಚ ಉಳಿತಾಯವಾಗಲಿದೆ. ಪ್ರಸ್ತುತ ಎರಡೂವರೆ ಲಕ್ಷ ರೂ. ಒಂದು ಕಾಂಪ್ಯಾಕ್ಟರ್‌ಗೆ ತಿಂಗಳಿಗೆ ಮಾಡುವ ವೆಚ್ಚ ಉಳಿತಾಯವಾಗಲಿದೆ. 286 ಕಾಂಪ್ಯಾಕ್ಟರ್‌ಗಳು ಬೆಳ್ಳಳ್ಳಿ ಕ್ವಾರಿಗೆ ಹೋಗುತ್ತಿವೆ. ಇದರಿಂದಾಗುವ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಅಥವಾ ಕಸದಿಂದ ವಿದ್ಯುತ್ ಉತ್ಪಾನೆ ಮಾಡುವ ಘಟಕಗಳನ್ನೂ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಈ ವೇಸ್ಟ್ ಟೂ ಎನರ್ಜಿ ಪ್ಲಾಂಟ್ ಕುರಿತ ಅಧ್ಯಯನಕ್ಕೆ ದೆಹಲಿಗೆ ಭೇಟಿ ನೀಡಲು ತೀರ್ಮಾನಿಸಿರುವುದಾಗಿ ಮೇಯರ್ ಗೌತಮ್ ತಿಳಿಸಿದರು.
ಕಸ ನಿರ್ವಹಣೆಗೆ ಎರಡು ವರ್ಷಕ್ಕೆ ಬೇಕಾದ ಕ್ವಾರಿಗಳ ವ್ಯವಸ್ಥೆ ಬಿಬಿಎಂಪಿ ಬಳಿ ಇದೆ:ಮಿಟಗಾನಹಳ್ಳಿ ಕ್ವಾರಿ ಈಗಾಗಲೇ ಸಿದ್ಧವಿದ್ದು, ಸರ್ಕಾರದ ಆದೇಶ ಪಡೆದ ನಂತರ ಕಸ ಸುರಿಯಲಾಗುವುದು ಎಂದರು. ಸದ್ಯ ಬೆಳ್ಳಳ್ಳಿ ಕ್ವಾರಿಯಲ್ಲಿ ಇನ್ನೂ ಕಸ ಹೋಗುತ್ತಿದೆ. ಎನ್‌ಜಿಟಿಯವರಿಂದ ಯಾವುದೇ ವಿರೋಧ ಇಲ್ಲ. ಬಾಗಲೂರಿನಲ್ಲಿ ಆಕ್ಷೇಪ ಇದ್ದ ಕಡೆಯೂ, ಉತ್ತಮ ವ್ಯವಸ್ಥೆಯಿಂದ ಪಾರ್ಕ್ ಮಾಡಲಾಗಿದೆ. ದುರ್ವಾಸನೆಯೂ ಬರುತ್ತಿಲ್ಲ. ಕಸದ ಲಿಚೆಟ್ ನೀರನ್ನೂ ಸಂಸ್ಕರಿಸಿ ಗಾರ್ಡನ್‌ಗಳಿಗೆ ಬಳಸಲಾಗ್ತಿದೆ ಎಂದರು.