ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೋವಿಡ್ ಪ್ರಭಾವ ಜೋರಾಗಿದ್ದು, ಹೀಗಾಗಿ ಸಂಡೇ ಲಾಕ್‌ಡೌನ್ ಟೈಂನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯ ಕಮ್ಯುನಿಟಿ ಕಾಲೇಜಿನಲ್ಲಿ ಸ್ಥಾಪಿಸಿರುವ ಕೋವಿಡ್-19 ವಾರ್ ರೂಂಗೆ ಮೇಯರ್ ಗೌತಮ್ ಕುಮಾರ್ ಭೇಟಿ ನೀಡಿದರು.
ದಕ್ಷಿಣ ವಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ಕೋವಿಡ್-19 ವಾರ್ ರೂಂನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿರುವ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಬೇಕು. ಹೋಮ್ ಐಸೋಲೇಷನ್‌ನಲ್ಲಿರುವವರು ಪ್ರತ್ಯೇಕ ಕೋಣೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬೇಕು. ಮನೆಯವರ ಜೊತೆ ಸಂಪರ್ಕವಿಟ್ಟುಕೊಳ್ಳದೆ ಗುಣಮುಖರಾಗುವವರೆಗೆ ಜಾಗರೂಕತೆಯಿಂದ ಇರುವಂತೆ ಮನವರಿಕೆ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬಳಿಕ ಬೊಮ್ಮನಹಳ್ಳಿ ವಲಯದ ಹೆಚ್ಎಸ್ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ಸ್ಥಾಪಿಸಿರುವ ಕೋವಿಡ್-19 ವಾರ್ ರೂಂಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ವಲಯ ಮುಖ್ಯ ಅಭಿಯಂತರರು ಸಿದ್ಧೇಗೌಡ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ಪ್ರತಿ ವಾರ್ಡ್‌ಗೆ ನಿಯೋಜನೆ ಮಾಡಿರುವ ನೋಡಲ್ ಅಧಿಕಾರಿಯಿಂದ ಸಮಪರ್ಕ ಮಾಹಿತಿ ಪಡೆದುಕೊಂಡು ತ್ವರಿತವಾಗಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸೂಕ್ತ ಕ್ರಮವಹಿಸಬೇಕು. ಟ್ರೇಸಿಂಗ್ ಸರಿಯಾಗಿ ಮಾಡಬೇಕು. ಹೋಂ ಐಸೋಲೇಶನ್‌ನಲ್ಲಿರುವವರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸೋಂಕಿನಿಂದ ಮೃತಪಟ್ಟರೆ ಮಾರ್ಗಸೂಚಿ ಪ್ರಕಾರ ಅಂತ್ಯ ಸಂಸ್ಕಾರ ಮಾಡಬೇಕು, ಯಾರಿಗೂ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದರು.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಲು ಹಲವು ಮಾದರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಟ್ವಿಟರ್ ಖಾತೆ @BommanhalliBBMP ತೆರೆದಿದ್ದು, ವ್ಯಾಟ್ಸ್‌ಆ್ಯಪ್, ಟೆಲಿಗ್ರಾಂ ಸಹಾಯವಾಣಿಯನ್ನು ತೆರೆಯಲಾಗಿದೆ. ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ 16 ವಾರ್ಡ್‌ಗಳ ನಾಗರಿಕರು ಸಹಾವಾಣಿ ಸಂಖ್ಯೆ 8884666670ಗೆ ಕರೆ ಮಾಡಿ ಕೋವಿಡ್ ಸಂಬಂಧಿಸಿದ ಮಾಹಿತಿ ಅಥವಾ ದೂರುಗಳನ್ನು ದಾಖಲಿಸಬಹುದಾಗಿದೆ ಎಂದರು.