ಬೆಂಗಳೂರು:ಮಡಿವಾಳ ಕೆರೆಯ ಬಳಿ ಬಿಬಿಎಂಪಿ ವತಿಯಿಂದ ನಿರ್ಮಾಣವಾಗುತ್ತಿರುವ 20 ಮೀ. ಕಾರಿಡಾರ್ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಮೇಯರ್ ಗೌತಮ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಡಿವಾಳ ಕೆರೆ ಏರಿ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ 700 ಮೀಟರ್ ಉದ್ದದ ರಸ್ತೆಗೆ ಕಾಂಕ್ರೀಟ್ ಬಳಸಿ ರಸ್ತೆ ನಿರ್ಮಾಣ ಮಾಡುವಂತೆ ಮೇಯರ್ ಎಂ. ಗೌತಮ್ ಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಡಿವಾಳದ 20ಮೀ. ಕಾರಿಡಾರ್ ಯೋಜನೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್, ಮಡಿವಾಳ ಕೆರೆ ಏರಿ ಪಕ್ಕ ಬರುವ 700 ಮೀಟರ್ ಉದ್ದದ ರಸ್ತೆಗೆ ಡಾಂಬರು ಬಳಸುವ ಬದಲು ಈ ಮಾರ್ಗದಲ್ಲಿ ಕಾಂಕ್ರೀಟ್ ಬಳಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆಯ ಪಕ್ಕದಲ್ಲೇ ರಸ್ತೆ ನಿರ್ಮಾಣವಾಗುತ್ತಿದ್ದು, ಮಳೆ ಬಂದಾಗ ಈ ರಸ್ತೆಗೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ 700 ಮೀ. ಮಾರ್ಗದಲ್ಲಿ ಕಾಂಕ್ರೀಟ್ ಬಳಸುವಂತೆ ಸೂಚನೆ ನೀಡಲಾಗಿದೆ ಎಂದರು.
20 ಮೀ. ಕಾರಿಡಾರ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಉದ್ದೇಶಿತ 1.02 ಕಿ.ಮೀ ಉದ್ದದ ರಸ್ತೆ ಕಾಮಗಾರಿಯು ಈಗಾಗಲೇ ಬುಹುತೇಕ ಮುಗಿದಿದೆ. ಮಡಿವಾಳ ಕೆರೆಗೆ ಸಂಪರ್ಕವಿರುವ ರಾಜಕಾಲುವೆ ಮೇಲೆ ಆರ್.ಸಿ.ಸಿ ರಿಟೈನಿಂಗ್ ವಾಲ್ ನಿರ್ಮಿಸಲಾಗುತ್ತಿದೆ. ಇದು ಚತುಷ್ಪಥ ರಸ್ತೆಯಾಗಿದ್ದು, ಉದ್ದೇಶಿತ ಯೋಜನೆಯ ಮೊದಲನೆಯ ಭಾಗ ತ್ವರಿತವಾಗಿ ಮುಗಿಯಲಿದೆ. ಮತ್ತೊಂದು ಭಾಗದಲ್ಲಿ ಭೂಸ್ವಾಧೀನದ ಸಮಸ್ಯೆಯಿದೆ. ಇದನ್ನು ಸಾಧ್ಯವಾದಷ್ಟು ಬೇಗ ಇತ್ಯರ್ಥ ಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇನ್ನು 20 ಮೀ. ಯೋಜನೆಯಿಂದಾಗಿ ಕೋರಮಂಗಲ, ಬಿಟಿಎಂ ಲೇಔಟ್ ಕಡೆಯಿಂದ ಹೊಸೂರು ರಸ್ತೆ ಸಿಲ್ಕ್ ಬೋರ್ಡ್ ರಸ್ತೆಗೆ ಸಂಪರ್ಕ ಸಾಧ್ಯವಾಗಲಿದ್ದು, ಇದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.