ಬೆಂಗಳೂರು:ಜರಗನಹಳ್ಳಿ ವಾರ್ಡ್ ವ್ಯಾಪ್ತಿಯ ಸಾರಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಮಹಾಪೌರರು ಸೇರಿದಂತೆ ಮಾನ್ಯ ಆಡಳಿತ ಪಕ್ಷದ ನಾಯಕರು, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು, ಅರಣ್ಯ ಉಪ ಸಂರಕ್ಷಣಾಧಿಕಾರಿ(ಕೆರೆಗಳು), ಜಲಮಂಡಳಿ ಅಧಿಕಾರಿಗಳು ಕಾಮಗಾರಿ ತಪಾಸಣೆಯಲ್ಲಿ ಭಾಗಿಯಾಗಿದ್ದರು.
ಸಾರಕ್ಕಿ ಕೆರೆ ಕಾಮಗಾರಿ ಪರಿಶೀಲನೆ ನಡೆಸಿದ ಮೇಯರ್.. ಈ ಕೆರೆಯನ್ನು 2016ರಲ್ಲಿ ಬಿಡಿಎಯಿಂದ ಬಿಬಿಎಂಪಿಗೆ ಹಸ್ತಾಂತರಿಸಲಾಯಿತು. ಬಳಿಕ ಕೆರೆ ಅಭಿವೃದ್ಧಿಗೆ 2016-17ರಲ್ಲಿ ರಾಜ್ಯ ಸರ್ಕಾರದ ನಗರೋತ್ಥಾನ ಅನುದಾನದಡಿ ₹ 6 ಕೋಟಿ, 2017-18ರಲ್ಲಿ ಜಿಒಕೆ ಅನುದಾನದಡಿ ₹ 5.75 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಳೆದ ವರ್ಷ ಬಿಬಿಎಂಪಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈಗಾಗಲೇ ಕೆರೆ ಸುತ್ತಲೂ ತಡೆಗೋಡೆ ನಿರ್ಮಿಸಿ ಅದರ ಮೇಲೆ ತಂತಿಬೇಲಿ ಅಳವಡಿಸುವ ಹಾಗೂ ಎರಡು ಮುಖ್ಯ ದ್ವಾರಗಳ ನಿರ್ಮಾಣ ಕಾರ್ಯ ಮುಗಿದಿದೆ. ಮಳೆ ನೀರು ಕೆರೆಗೆ ಸರಾಗವಾಗಿ ಸೇರಲು ಒಂಬತ್ತು ಕಡೆ ಸಿಮೆಂಟ್ ಕೊಳವೆಗಳನ್ನು ಅಳವಡಿಸಲಾಗಿದೆ. 3.2 ಕಿ.ಮೀ ಉದ್ದದ ವಾಯುವಿಹಾರ ಪಥ ನಿರ್ಮಾಣದ ಕೆಲಸ ಮತ್ತು ಎರಡು ಕಡೆ ಕೋಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು ಅಧಿಕಾರಿಗಳು ಮಾಹಿತಿ ನೀಡಿದರು.
2019-20ರಲ್ಲಿ ನವ ಬೆಂಗಳೂರು ಅನುದಾನದಡಿ ₹ 5 ಕೊಟಿ ಬಿಡುಗಡೆಯಾಗಿದ್ದು, ಕೆರೆ ಅಂಗಳದಲ್ಲಿ ಉದ್ಯಾನ, ಮಕ್ಕಳಿಗೆ ಆಟದ ಮೈದಾನ, ದೋಣಿ ವಿಹಾರ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿ ಸಾರಕ್ಕಿ ಕೆರೆಯನ್ನು ನಗರದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಮಹಾಪೌರರು ಮಾತನಾಡಿ, ಸಾರಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಿ ವರ್ಷಾಂತ್ಯದೊಳಗಾಗಿ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜರಗನಹಳ್ಳಿ ಮತ್ತು ಆರ್‌ಬಿಐ ಬಡಾವಣೆಗಳಿಂದ ಕೆರೆಗೆ ಸೇರುತ್ತಿರುವ ತ್ಯಾಜ್ಯನೀರನ್ನು ಸಂಸ್ಕರಿಸಲು ಜಲಮಂಡಳಿ ವತಿಯಿಂದ ಎಂಟು ಎಕರೆ ಪ್ರದೇಶದಲ್ಲಿ ₹ 14.49 ಕೋಟಿ ವ್ಯಯಿಸಿ 50 ಲಕ್ಷ ಲೀಟರ್ ಸಾಮರ್ಥ್ಯದ ಎಸ್ಟಿಪಿ ನಿರ್ಮಾಣ ಮಾಡಲಾಗುತ್ತಿದೆ. ಎಸ್ಟಿಪಿಯಿಂದ ಸಂಸ್ಕರಿಸುವ ನೀರನ್ನು ವಾಯುವಿಹಾರದ ಪಕ್ಕದಲ್ಲಿ ಕೊಳವೆಗಳನ್ನು ಅಳವಡಿಸಿ ಕೆರೆಗೆ ಬಿಡಲಾಗುವುದು ಎಂದು ಜಲಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರರು ಮಹಾಪೌರರಿಗೆ ಮಾಹಿತಿ ನೀಡಿದರು.