ಬೆಂಗಳೂರು:ಇನ್ನೇನು ಚುನಾವಣೆ ಘೋಷಣೆ ಆಗಲಿದ್ದು, ನೀತಿ ಸಂಹಿತೆ ಜಾರಿಯಾಗಲಿದೆ. ಅದಕ್ಕೂ ಮುನ್ನ ಬೊಮ್ಮಾಯಿ ಸರ್ಕಾರದ ಬಹುತೇಕ ಕೊನೆಯ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನಗಳ ಜೊತೆ ಪಂಚಮಸಾಲಿ ಮೀಸಲಾತಿ ಬಗ್ಗೆ ಚರ್ಚೆ ನಡೆಯಲಾಗುವುದು ಎಂದು ಹೇಳಲಾಗುತ್ತಿದೆ.
ವೀರಶೈವ ಪಂಚಮಸಾಲಿಗೆ 10% ಮೀಸಲಾತಿ?: ಹೈ ಕೋರ್ಟ್ ವೀರಶೈವ ಹಾಗೂ ಒಕ್ಕಲಿಗರಿಗೆ 2D, 2C ಹೊಸ ಪ್ರವರ್ಗ ರಚಿಸಿರುವ ಸರ್ಕಾರದ ನಿರ್ಧಾರದ ಮೇಲಿನ ತಡೆಯಾಜ್ಞೆ ತೆರವುಗೊಳಿಸುವ ಮೂಲಕ ಸಿಎಂ ಬೊಮ್ಮಾಯಿ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಈಗಾಗಾಲೇ ಪಂಚಮಸಾಲಿ ಮೀಸಲಾತಿ ಹೋರಾಟ ಬಿಜೆಪಿಗೆ ಚುನಾವಣೆ ಹೊಸ್ತಿಲಲ್ಲಿ ದೊಡ್ಡ ಕಂಟಕವಾಗಿ ಪರಿಣಮಿಸುವ ಆತಂಕ ಎದುರಾಗಿದೆ.
ಇದೀಗ ಹೈ ಕೋರ್ಟ್ ತೊಡಕು ನಿವಾರಣೆಯಾಗಿದ್ದು, ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವೀರಶೈವ ಪಂಚಮಸಾಲಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸುವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರಂತೆ 2D ಪ್ರವರ್ಗದಡಿ ವೀರಶೈವ ಪಂಚಮಸಾಲಿಗೆ 10% ಮೀಸಲಾತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈವರೆಗೆ ಲಿಂಗಾಯತ ಸಮುದಾಯ 3B ಪ್ರವರ್ಗದಡಿ 5% ಮೀಸಲಾತಿಗೆ ಅರ್ಹರಿದ್ದರು.
ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಜಯಮೃತ್ಯುಂಜಯ ಸ್ವಾಮಿ ಮೀಸಲಾತಿ ಕಲ್ಪಿಸುವ ಸಂಬಂಧ ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಸಂಬಂಧ 2A ಮೀಸಲಾತಿಯಡಿ ಸಿಗುವಂತ ಮೀಸಲಾತಿ ಪ್ರಮಾಣ, ಸೌಲಭ್ಯ 2D ಪ್ರವರ್ಗದಲ್ಲಿ ಕಲ್ಪಿಸಿಕೊಡುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ವಾಮೀಜಿ ಕೂಡ ಈ ಸಂಬಂಧ ಆಶಾವಾದದಲ್ಲಿ ಇದ್ದಾರೆ.
ಪಂಚಮಸಾಲಿ ಮೀಸಲಾತಿ ವಿಚಾರ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ತೊಡಕು ಉಂಟು ಮಾಡುವ ಆತಂಕ ಎದುರಾಗಿದೆ. ಇತ್ತ ಸಿಎಂ ಬೊಮ್ಮಾಯಿಗೆ ಸ್ವಂತ ಕ್ಷೇತ್ರವಾದ ಶಿಗ್ಗಾವಿಯಲ್ಲೇ ಪಂಚಮಸಾಲಿಗಳ ಆಕ್ರೋಶದ ಬಿಸಿ ತಟ್ಟುವ ಆತಂಕ ಉಂಟಾಗಿತ್ತು. ಆ ಆಕ್ರೋಶದ ಕಿಚ್ಚನ್ನು ತಣಿಸಲು ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಸುಮಾರು 50-60% ಪಂಚಮಸಾಲಿ ಸಮುದಾಯದ ಪ್ರಾಬಲ್ಯ ಇದೆ. ಹೀಗಾಗಿ ಅವರಿಗೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಿಹಿ ಸುದ್ದಿ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.
ಮೀಸಲಾತಿ ಕೊಡುವ ಲೆಕ್ಕಚಾರ ಹೇಗಿದೆ?:3A ನಲ್ಲಿ ಇದ್ದ ಒಕ್ಕಲಿಗರನ್ನು 2C ಗೆ ತರಲು ಹಾಗೂ 3B ನಲ್ಲಿ ಇದ್ದ ಪಂಚಮಸಾಲಿ ಸೇರಿ ಲಿಂಗಾಯತರನ್ನು 2D ಪ್ರವರ್ಗಕ್ಕೆ ಸೇರ್ಪಡೆ ಮಾಡಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ EWSನ 10% ಮೀಸಲಾತಿ ನೀಡಲು ನಿರ್ಧಾರ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುವ ಜನರ ಸಂಖ್ಯೆಯ ಆಧಾರದಲ್ಲಿ ಅವರಿಗೆ ಮೀಸಲಾತಿ ನೀಡಿ, ಉಳಿದದ್ದನ್ನು 2C ಹಾಗೂ 2Dಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲು ನಿರ್ಧಾರ ಮಾಡಲಾಗಿತ್ತು.
ಹಿಂದುಳಿದ ವರ್ಗಗಳ ಪ್ರವರ್ಗ 3A (ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12ಜಾತಿಗಳು), ಹಿಂದುಳಿದ ವರ್ಗಗಳ ಪ್ರವರ್ಗ 3B (ವೀರಶೈವ ಮತ್ತು ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳು) ಇದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಿಫಾರಸಿನ ಅನ್ವಯ, ಈ ಪ್ರವರ್ಗಗಳ ಪೈಕಿ, 3A ಮತ್ತು 3B ಪ್ರವರ್ಗಗಳನ್ನು ತೆಗೆದುಹಾಕಿ, ಅದರ ಬದಲು ಪ್ರವರ್ಗ 2C ಮತ್ತು 2D ರಚಿಸಿ, ಇಡಬ್ಲ್ಯುಎಸ್ ಮೀಸಲಾತಿಯನ್ನು ಮರು ಹಂಚಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
3Bಯಲ್ಲಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ತಮ್ಮನ್ನು 'ಪ್ರವರ್ಗ 2ಎ'ಗೆ ಸೇರಿಸಬೇಕೆಂದು ಪಟ್ಟು ಹಿಡಿದಿತ್ತು. ಪ್ರವರ್ಗ 3ಬಿಗೆ ಸದ್ಯ ಶೇ.5ರಷ್ಟು ಮೀಸಲಾತಿಯಿದೆ. ಇದೀಗ ಪ್ರತ್ಯೇಕ ಪ್ರವರ್ಗ 2ಡಿ ರಚಿಸಲಾಗಿದ್ದು, ಇಡಬ್ಲ್ಯುಎಸ್ ಮೀಸಲಾತಿಯಿಂದ ಶೇ.4-5ರಷ್ಟನ್ನು 2Dಗೆ ಮರುಹಂಚಿಕೆ ಮಾಡಿ ಸುಮಾರು 10% ಮೀಸಲಾತಿ ನೀಡಲು ಯೋಚಿಸಲಾಗುತ್ತಿದೆ ಎನ್ನಲಾಗಿದೆ.
ಒಕ್ಕಲಿಗ ಉಪ ಪಂಗಡಗಳನ್ನು ಒಳಗೊಂಡ 'ಪ್ರವರ್ಗ-3ಎ'ಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಶೇ. 4 ರಿಂದ ಶೇ. 12ಕ್ಕೆ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಪಟ್ಟು ಹಿಡಿದಿದೆ. ಈ ಪ್ರವರ್ಗವನ್ನು 'ಪ್ರವರ್ಗ 2ಸಿ' ಎಂದು ಬದಲಾಯಿಸಲಾಗಿದ್ದು, ಇಡಬ್ಲ್ಯುಎಸ್ ಮೀಸಲಾತಿಯಿಂದ ಶೇ. 3ರಷ್ಟನ್ನು ಮರುಹಂಚಿಕೆ ಮಾಡಿ ಈ ಹೊಸ ಪ್ರವರ್ಗಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಚಿಂತನೆ ನಡೆದಿದೆ. ಯಾವ ರೀತಿ ಇಡಬ್ಲ್ಯುಎಸ್ನಿಂದ ಮೀಸಲಾತಿ ಮರುಹಂಚಿಕೆ ಮಾಡುತ್ತೆ ಎಂಬುದೇ ಇದೀಗ ಕುತೂಹಲ ಕೆರಳಿಸಿದೆ.
ಪಂಚಮಸಾಲಿ ಹೋರಾಟದ ವಿಸ್ತೃತ ಮಾಹಿತಿ:ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೀಸಲಾತಿ ಹೋರಾಟಗಳು ಬೆಂಬಿಡದಂತೆ ಕಾಡುತ್ತಿವೆ. ಇದರಲ್ಲಿ ಪ್ರಮುಖವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಮಾತ್ರ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ. ಪಾದಯಾತ್ರೆ, ಧರಣಿ, ಸಿಎಂ ಮನೆ ಮತ್ತಿಗೆಯಂತಹ ಯತ್ನಗಳ ನಡುವೆಯೂ ಕಳೆದ ಮೂರು ವರ್ಷದಿಂದ ನಿರಂತರವಾಗಿ ಸರ್ಕಾರದ ಬೆನ್ನು ಬಿಡದೆ ಹೋರಾಟದ ಮೂಲಕ ಕತ್ತಿಯ ಅಲಗಿನ ಮೇಲೆ ಸರ್ಕಾರ ನಡೆಯುವಂತೆ ಮಾಡಿತ್ತು. ಈ ಹೋರಾಟದ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಂದಿನಿಂದ ಬೊಮ್ಮಾಯಿ ಬಂದರೂ ಹೋರಾಟದ ಕಿಚ್ಚು ನಿಂತಿಲ್ಲ. ಸರ್ಕಾರಕ್ಕೆ ಪದೇ ಪದೇ ಗಡುವು ನೀಡುತ್ತಲೇ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದೆ. ಚುನಾವಣಾ ಸಮಯವಾಗಿರುವುದರಿಂದ ಈ ಹೋರಾಟಗಳು ಬಿಜೆಪಿ ಸರ್ಕಾರಕ್ಕೆ ಅಕ್ಷರಶಃ ಬಿಸಿತುಪ್ಪವಾಗಿ ಪರಿಣಮಿಸಿದೆ.
ಪ್ರಮುಖವಾಗಿ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡುವಂತೆ ಬೇಡಿಕೆ ಇರಿಸಿಕೊಂಡು 2021ರ ಜನವರಿ 14 ರಂದು ಬಸವಕಲ್ಯಾಣದಿಂದ ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯ ಪಾದಯಾತ್ರೆ ಮೂಲಕ ಬೆಂಗಳೂರು ಚಲೋ ನಡೆಸಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿತು. ಆದರೆ ಸರ್ಕಾರ ಬೇಡಿಕೆಗೆ ಸ್ಪಂದಿಸದ ಹಿನ್ನಲೆಯಲ್ಲಿ ಬಸವ ಜಯ ಮೃತ್ಯುಂಜಯ ಶ್ರೀಗಳು ನಗರದ ಫ್ರೀಡಂ ಪಾರ್ಕ್ನಲ್ಲಿ ಫೆಬ್ರವರಿ 4 ರಿಂದ ಮಾರ್ಚ್ 4ರವರೆಗೆ ಸತ್ಯಾಗ್ರಹ ನಡೆಸಿದರು.
ನಂತರವೂ ಸರ್ಕಾರ ಬೇಡಿಕೆ ಪರಿಗಣಿಸದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವ ಘೋಷಣೆ ಮಾಡಿದರು. ಪರಿಸ್ಥಿತಿಯ ಗಂಭೀರತೆ ಅರಿತ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೀಸಲಾತಿ ಕಲ್ಪಿಸುವ ಕುರಿತು ನಿರ್ಧಾರ ಕೈಗೊಳ್ಳಲು 6 ತಿಂಗಳ ಸಮಯ ಕೋರಿದರು. ಸಮುದಾಯದ ಸಚಿವರಾದ ಮುರುಗೇಶ್ ನಿರಾಣಿ ಹಾಗು ಸಿ.ಸಿ ಪಾಟೀಲ್ ಮೂಲಕ ಭರವಸೆಯನ್ನು ಕೂಡಲಸಂಗಮ ಶ್ರೀಗಳಿಗೆ ತಲುಪಿಸಿದರು. ಹೀಗಾಗಿ ಅಂದು ಸತ್ಯಾಗ್ರಹ ಕೈಬಿಟ್ಟ ಶ್ರೀಗಳು ಮಠಕ್ಕೆ ವಾಪಸ್ಸಾಗಿದ್ದರು.
ಪಂಚಮಸಾಲಿ ಉಪ ಪಂಗಡವನ್ನು 3ಬಿ ಪ್ರವರ್ಗದಿಂದ 2ಎ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸೇರಿದಂತೆ ಇತರೆ ಸಮುದಾಯಗಳ ಮೀಸಲು ಬೇಡಿಕೆ ಪರಿಶೀಲಿಸಿ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ರಾಜ್ಯ ಸರ್ಕಾರ 2021ರ ಜು.1ರಂದು ಆದೇಶ ಹೊರಡಿಸಿತ್ತು. ನಂತರ ಕೆಲವೇ ದಿನದಲ್ಲಿ ಯಡಿಯೂರಪ್ಪ ಕುರ್ಚಿಯಿಂದ ಇಳಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಅವರಿಗೂ ಹೋರಾಟದ ಕಾವು ಬಿಡಲಿಲ್ಲ. ಬಸವರಾಜ ಬೊಮ್ಮಾಯಿ ಅವರಿಗೆ ಮೂರು ಬಾರಿ ಗಡುವು ನೀಡಿರುವ ಬಸವ ಜಯ ಮೃತ್ಯುಂಜಯ ಶ್ರೀಗಳು ಇದೀಗ ಕಡೆಯ ಅಸ್ತ್ರವಾಗಿ ಮತ್ತೆ ಸತ್ಯಾಗ್ರಹ ಆರಂಭಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರವಾಗಿ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಪಡೆದು ಸದ್ಯಕ್ಕೆ ಹೊಸ ಪ್ರವರ್ಗ ರಚಿಸಿ ಅಂತಿಮ ವರದಿ ಬಂದ ನಂತರ ಮೀಸಲಾತಿ ಪ್ರಮಾಣ ನಿಗದಿ ಮಾಡುವ ಘೋಷಣೆ ಮಾಡಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕವಾಗಿ 2ಡಿ ಪ್ರವರ್ಗ ರಚಿಸಿದ್ದಾರೆ. ಆದರೂ ಸರ್ಕಾರಕ್ಕೆ ಹೋರಾಟದ ಬಿಸಿ ತಗ್ಗಿಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಭುಗಿಲೆದ್ದಿತು. ಶಿಗ್ಗಾಂವಿಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ನಂತರ ಹೋರಾಟವನ್ನು ರಾಜ್ಯ ರಾಜಧಾನಿಗೆ ಸ್ಥಳಾಂತರ ಮಾಡಲಾಗಿದೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ.
ಫ್ರೀಡಂ ಪಾರ್ಕ್ನಲ್ಲಿ ಧರಣಿ ನಿರತ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಯಡಿಯೂರಪ್ಪ 2 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರೂ ನಮ್ಮ ಸಮುದಾಯದ ಕೈ ಹಿಡಿಯಲಿಲ್ಲ. ಬಸವರಾಜ ಬೊಮ್ಮಾಯಿ 6 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. 2ಎ ಮೀಸಲಾತಿ ನೀಡುವ ಬದಲು 2ಡಿ ಅಂತ ಕೊಟ್ಟಿದ್ದಾರೆ. ಇದು ನಮ್ಮ ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. 2ಡಿ ಮೀಸಲಾತಿ ತಿರಸ್ಕರಿಸಿದ್ದೇವೆ. ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕು. ಇದು ಸಾಧ್ಯವಾಗಲ್ಲ ಎನ್ನುವುದಾದರೆ ಅದನ್ನು ನೇರವಾಗಿ ಹೇಳಬೇಕು. ನೀತಿ ಸಂಹಿತೆ ಕಾರಣ ಮುಂದಿಟ್ಟರೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗಲಿದೆ ಎನ್ನುವ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ಶ್ರೀಗಳ ಎಚ್ಚರಿಕೆ ನಂತರ ಎಚ್ಚೆತ್ತುಕೊಂಡ ಬೊಮ್ಮಾಯಿ ಸರ್ಕಾರ ಇದೀಗ ಅಳೆದು ತೂಗಿ ಇಂದಿನ ಸಚಿವ ಸಂಪುಟದಲ್ಲಿ ಪಂಚಮಸಾಲಿ ಮೀಸಲಾತಿ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗುತ್ತಿದೆ. ಚುನಾವಣಾ ದೃಷ್ಟಿಯಿಂದ ಪ್ರಮುಖ ಸಮುದಾಯದ ವಿರೋಧಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳುವ ಜಾಣ್ಮೆಯ ನಡೆಯನ್ನು ಬಿಜೆಪಿ ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ:ಕೆಪಿಟಿಸಿಎಲ್, ಎಸ್ಕಾಂ ನೌಕರರಿಗೆ ಶೇ.20, ಸಾರಿಗೆ ನೌಕರರಿಗೆ ಶೇ.15 ವೇತನ ಹೆಚ್ಚಳ