ಬೆಂಗಳೂರು: ರಾಜ್ಯಕ್ಕೆ ಹೊಸ ಸರ್ಕಾರ ತರುವ ದಿನಾಂಕ ಘೋಷಣೆ ಆಗಿದೆ. ಮೇ 10 ಕೇವಲ ಫಲಿತಾಂಶ ದಿನ ಮಾತ್ರವಲ್ಲ, ಭ್ರಷ್ಟಾಚಾರವನ್ನು ತೆಗೆದುಹಾಕುವ ದಿನವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೇಂದ್ರದ ಮಾಜಿ ಸಚಿವ ಆನಂದ ಶರ್ಮಾ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಮೇ 10ಕ್ಕೆ ಚುನಾವಣೆ ಘೋಷಣೆ ಆಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡ ಬಳಿಕ ಕೊನೆಗೂ ಶುಭ ದಿನ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಿಸಿದೆ ಎಂದು ಹೇಳಿದರು.
ಎರಡೂ ಇಂಜಿನ್ ಫೇಲ್ ಆಗಿವೆ, ಹೊಸ ಇಂಜಿನ್ ಗೆ ಮತದಾರರು ಚಾಲನೆ ನೀಡುವ ಸಂಕಲ್ಪ ಮಾಡಿದ್ದಾರೆ. ಹೊಸಸಂಕಲ್ಪ ಮಾಡುವ ದಿನ ಅಂದು ಬರಲಿದೆ. ಕಾಂಗ್ರೆಸ್ ಪ್ರಗತಿ ತರಲಿದೆ. ಒಂದೇ ಹಂತದ ಈ ಚುನಾವಣೆಯನ್ನು ಸ್ವಾಗತಿಸುತ್ತೇವೆ. ಚುನಾವಣಾ ಆಯೋಗ ತಿಳಿಸಿರುವ ಬದಲಾವಣೆಯನ್ನು ನಾವು ಜನರಿಗೆ ವಿವರಿಸುತ್ತೇವೆ ಎಂದು ಡಿಕೆಶಿ ಹೇಳಿದರು.
ಆಡಳಿತ ಪಕ್ಷದ ಅಡಿಯಾಳಾಗಿ ಯಾರೂ ಇರಲ್ಲ. ಜನರು ಇಷ್ಟು ದಿನದ ಅನ್ಯಾಯಕ್ಕೆ ಕಡಿವಾಣ ಬೀಳಲಿದೆ. ಉತ್ತಮ ಸರ್ಕಾರಕ್ಕೆ ಜನ ನಾಂದಿ ಹಾಡುತ್ತಾರೆ. ಬಿಜೆಪಿ ಸ್ಪಷ್ಟ ಅಧಿಕಾರಕ್ಕೆ ಬರುವುದಾಗಿದ್ದರೆ ಮೋದಿ ದಿನಾ ಯಾಕೆ ಇಲ್ಲಿ ಬರುತ್ತಿದ್ದರು. ಮನೆ ಮನೆಗೆ ಯಾಕೆ ಭೇಟಿ ಕೊಡುತ್ತಿದ್ದಾರೆ. ಭಯ ಅವರಲ್ಲಿ ಕಾಣುತ್ತಿದೆ. 40% ಸರ್ಕಾರದ ಅಬ್ಬರ ನಿಲ್ಲಲಿದೆ. ಜನ ನೆಮ್ಮದಿ ಕಾಣಲಿದ್ದಾರೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಬಳಕೆಯಾಗದಿರುವ ಇವಿಎಂ ಯಂತ್ರ ಬಳಸಿ ಎಂದು ಮನವಿ ಮಾಡಿದ್ದೆವು. ಅವರು ಭರವಸೆ ಕೊಟ್ಟಿದ್ದು, ಇಂದು ಸಂಜೆ ಸಭೆ ಕರೆದಿದ್ದಾರೆ. ಮನವರಿಕೆ ಮಾಡಿಕೊಡಲು ಕೇಳಿದ್ದೇವೆ. ಪರಿಹರಿಸುತ್ತೇವೆ ಎಂದಿದ್ದರು. ಅವರ ಮೇಲೆ ನಂಬಿಕೆ ಇದೆ. ಉತ್ತಮ ಚುನಾವಣೆ ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.
ಏ.5ಕ್ಕೆ ರಾಹುಲ್ ಗಾಂಧಿ ಕೋಲಾರಕ್ಕೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಏ.5 ಕ್ಕೆ ರಾಹುಲ್ ಗಾಂಧಿ ಕೋಲಾರಕ್ಕೆ ಆಗಮಿಸುತ್ತಿದ್ದಾರೆ. ಸತ್ಯಮೇವ ಜಯತೇ ಕಾರ್ಯಕ್ರಮ ಮೂಲಕ ದೇಶಾದ್ಯಂತ ತಮ್ಮ ಹೋರಾಟಕ್ಕೆ ಚಾಲನೆ ನೀಡುತ್ತಿದ್ದಾರೆ. ನಾವು ಇಲ್ಲಿಂದ ಹೋರಾಟ ಆರಂಭಿಸುವಂತೆ ಮನವಿ ಮಾಡಿದ್ದೆವು. ರಾಜ್ಯ, ರಾಷ್ಟ್ರ ರಾಜಕಾರಣದ ಬದಲಾವಣೆ ಗಾಳಿ ಈ ಮೂಲಕ ಬೀಸಲಿದೆ ಎಂದು ತಿಳಿಸಿದರು.
ದೇಶದ ಪ್ರಜಾಪ್ರಭುತ್ವ ಆಗಿರುವ ಅಪಮಾನಕ್ಕೆ ಉತ್ತರ ಕೊಡಬೇಕಿದೆ. ಹೋರಾಟದ ಆರಂಭ ಹಾಗೂ ಮುನ್ನಡೆ ಇಲ್ಲದ ಸಿಗಲಿದೆ. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಗೆ ಎದುರಾದ ಭಯ ಈ ಸನ್ನಿವೇಶ ಎದುರಾಗಲು ಕಾರಣ. ಅವರ ಭಾರತ್ ಜೋಡೊ ಯಾತ್ರೆ ಯಶಸ್ಸನ್ನು ಬಿಜೆಪಿ ಸಹಿಸುತ್ತಿಲ್ಲ ಎಂದು ಅಪಾದನೆ ಮಾಡಿದರು.
ಸಿದ್ದರಾಮಯ್ಯಗೆ ಎರಡು ಕ್ಷೇತ್ರ: ಸಿದ್ದರಾಮಯ್ಯ ಎರಡು ಕ್ಷೇತ್ರದ ಸ್ಪರ್ಧೆ ಹೈಕಮಾಂಡ್ ಗೆ ಬಿಟ್ಟಿದ್ದು. ನಾನು ಇದರ ಮಧ್ಯ ಪ್ರವೇಶಿಸಲ್ಲ. ಕೇಂದ್ರ ಚುನಾವಣಾ ಸಮಿತಿ ಎಲ್ಲವನ್ನೂ ನಿರ್ಧರಿಸಲಿದೆ. ನಾನ್ಯಾಕೆ ಅದನ್ನು ಬದಲಿಸಲಿ. ನೀವುಂಟು, ಅವರುಂಟು. ಎರಡು ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿದರೆ ಅದನ್ನು ಹೈಕಮಾಂಡ್ ನಿರ್ಧಾರ ಆಗಲಿದೆ. ಯಾವುದನ್ನೂ ನಾವು ಪ್ರಶ್ನಿಸಲ್ಲ. ಬೆಂಬಲಿಸಬೇಕಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.
ಪ್ರಜಾಪ್ರಭುತ್ವ ಕಗ್ಗೊಲೆ - ಆನಂದ ಶರ್ಮಾ:ಕೇಂದ್ರದ ಮಾಜಿ ಸಚಿವಆನಂದ ಶರ್ಮಾ ಮಾತನಾಡಿ, ಲೋಕಸಭೆಯಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗಿದೆ. ಲೋಕಸಭೆ ಆರಂಭವಾದ ದಿನದಿಂದಲೂ ಇದುವರೆಗೂ ಪ್ರತಿಪಕ್ಷವನ್ನು ಮಾತನಾಡದಂತೆ ಮಾಡುವ ಕೆಲಸ ಆಗಿರಲಿಲ್ಲ. ವಿಶ್ವದಲ್ಲೇ ಇಂತಹ ಪ್ರಯತ್ನ ನಡೆದಿರಲಿಲ್ಲ. ಪ್ರತಿಪಕ್ಷಗಳ ದನಿ ಅಡಗಿಸುವ ಮಟ್ಟಿಗೆ ಕೇಂದ್ರ ಸರ್ಕಾರಕ್ಕೆ ಭಯವಾಗಿದೆ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ನಮ್ಮ ನಾಯಕರಾದ ರಾಹುಲ್ ಗಾಂಧಿ ವಿದೇಶದಲ್ಲಿ ಪ್ರಜಾಪ್ರಭುತ್ವ ಹತ್ತಿಕ್ಕುವ ವಿಚಾರ ಪ್ರಸ್ತಾಪಿಸಿದ್ದರು. ಇದರಿಂದ ಬಿಜೆಪಿ ಸರ್ಕಾರ ನಮ್ಮ ದನಿ ಅಡಗಿಸುವ ಯತ್ನ ಮಾಡಿದೆ. ಸಂಸತ್ ನಲ್ಲಿ ನಮಗೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆ ನಾವು ದೇಶಾದ್ಯಂತ ನಮ್ಮ ದನಿ ವಿವರಿಸುವ ಕಾರ್ಯ ಮಾಡುತ್ತಿದ್ದೇವೆ. ಹಿಂದೆ ಅಧಿಕಾರಕ್ಕೆ ಬಂದ ಯಾವ ಪ್ರಧಾನಿಯೂ ಪ್ರತಿಪಕ್ಷಗಳ ದನಿ ಹತ್ತಿಕ್ಕುವ ಯತ್ನ ಮಾಡಿರಲಿಲ್ಲ ಎಂದು ಅವರು ಹೇಳಿದರು.
ದೊಡ್ಡ ಮೊತ್ತದ ಹಣ ಅದಾನಿ ಕಂಪನಿಯಲ್ಲಿ ಹೂಡಿಕೆ-ಶರ್ಮಾ:ಅದಾನಿ ಸಮೂಹವನ್ನು ಕಾಪಾಡುವ ಕಾರ್ಯ ಮಾಡುತ್ತಿದೆ. ನಾವು ವ್ಯಾಪಾರಿಗಳ ವಿರುದ್ಧ ಅಂತ ಹೇಳಲ್ಲ. ಆದರೆ ಕೇಂದ್ರ ಸರ್ಕಾರ ಅವರ ಬೆಂಬಲಕ್ಕೆ ನಿಂತಿದ್ದು ಸರಿಯಲ್ಲ. ಇಲ್ಲಿನ ಚಟುವಟಿಕೆ ಬಗ್ಗೆ ನಾವು ಪ್ರಶ್ನೆ ಮಾಡುವಂತಿಲ್ಲವೇ? ಭಾರತೀಯರ ದೊಡ್ಡ ಮೊತ್ತದ ಹಣ ಈ ಕಂಪನಿಯಲ್ಲಿ ಹೂಡಿಕೆ ಆಗಿದೆ. ಇಲ್ಲಿನ ಅಕ್ರಮದ ತನಿಖೆಯನ್ನು ಕೇಂದ್ರದ ಯಾವುದಾದರೂ ತನಿಖಾ ಸಂಸ್ಥೆ ಮೂಲಕ ಮಾಡಬಹುದಿತ್ತು. ಜಂಟಿ ಸದನ ಸಮಿತಿ ರಚಿಸಲು ನಾವು ಒತ್ತಾಯಿಸಿದ್ದೆವು. ಎಸ್ಬಿಐ, ಎಲ್ಐಸಿ ಹಣ ಇಲ್ಲಿದೆ. ಇಪಿಎಫ್ ಹಣ ಸಹ ಇಲ್ಲಿದೆ ಎಂಬ ಮಾಹಿತಿ ಇದೆ. ಇದರಿಂದ ಸೂಕ್ತ ತನಿಖೆಗೆ ನಾವು ಒತ್ತಾಯಿಸಿದ್ದೇವೆ ಎಂದರು.
ರಾಹುಲ್ ಸಂಸತ್ ಸ್ಥಾನ ಅನರ್ಹತೆ ಷಡ್ಯಂತ್ರ-ಶರ್ಮಾ:ರಾಹುಲ್ ಗಾಂಧಿ ಸಂಸತ್ ಸ್ಥಾನ ಅನರ್ಹತೆ ಅಕ್ಷಮ್ಯ. ಇದು ಕಾನೂನು ವ್ಯಾಪ್ತಿಯ ಅಡಿ ಬರಲ್ಲ. ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಪ್ರತಿಪಕ್ಷದ ಪ್ರಮುಖ ನಾಯಕರನ್ನು ಈ ರೀತಿ ಕಟ್ಟಿ ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಆಕ್ಷೇಪಿಸಿದರು.
ದೀರ್ಘಕಾಲದ ಅನರ್ಹತೆಗೆ ಅವಕಾಶ ಇಲ್ಲ-ಆನಂದ ಶರ್ಮಾ: ನೀರವ್ ಮೋದಿ, ಲಲಿತ್ ಮೋದಿ ಈಗಲೂ ತಲೆಮರೆಸಿಕೊಂಡೇ ಇದ್ದಾರೆ. ಮೋದಿ ಅಡ್ಡ ಹೆಸರು ಹೊಂದಿರುವವರು ದೇಶಾದ್ಯಂತ ಇದ್ದಾರೆ. ಎಲ್ಲಾ ಜಾತಿಯಲ್ಲೂ ಮೋದಿ ಎಂಬುವರಿದ್ದಾರೆ. ರಾಹುಲ್ ಗಾಂಧಿ ಹೇಳಿದ್ದಾದರೂ ಏನು? ಈಗ ಇದನ್ನು ದೊಡ್ಡ ವಿಚಾರವಾಗಿಸುವ ಅಗತ್ಯವೇನಿತ್ತು? ಈ ಅನರ್ಹತೆ ಹಿಂದೆ ಯಾವ ಉದ್ದೇಶ ಇದೆ ಎಂಬುದು ನಮಗೆ ತಿಳಿದಿದೆ. ಇಷ್ಟು ದೀರ್ಘ ಕಾಲದ ಅನರ್ಹತೆತೆ ಅವಕಾಶ ಇಲ್ಲವೆಂದು ಅವರು ಹೇಳಿದರು.
ಇದನ್ನೂಓದಿ:ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ